ರಾಯ್‌ಪುರ: ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ದ್ವೇಷದ ಹಿನ್ನೆಲೆಯಲ್ಲಿ ಅತ್ಯಂತ ಭೀಕರ ನರಮೇಧ ನಡೆದಿದೆ. ಮಂಗಳವಾರ ರಾತ್ರಿ, ಗುಂಪೊಂದು ಚಲಿಸುತ್ತಿದ್ದ ಫಾರ್ಚೂನರ್ ಎಸ್‌ಯುವಿ (SUV) ಕಾರಿಗೆ ಟಿಪ್ಪರ್ ಲಾರಿಯಿಂದ ಸರಣಿ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ, ಕಾರಿನ ಬಾಗಿಲುಗಳು ಜಾಮ್ ಆಗಿ ಒಳಗೆ ಸಿಲುಕಿಕೊಂಡಿದ್ದವರನ್ನು ಕಾರಿನ ಸಮೇತ ಜೀವಂತವಾಗಿ ಸುಟ್ಟು ಕೊಂದಿರುವ ಅತ್ಯಂತ ಕ್ರೂರ ಘಟನೆ ನಡೆದಿದ್ದು, ಇದು ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಈ ಭೀಕರ ದಾಳಿಯಲ್ಲಿ ಬಿಜೆಪಿ ಮುಖಂಡ ಭರತ್ ಸಿಂಗ್ ಅಲಿಯಾಸ್ ಲಲ್ಲಾ ಸಿಂಗ್, ವೀರೇಂದ್ರ ಪ್ರತಾಪ್ ಸಿಂಗ್ ಮತ್ತು ನಾಗೇಂದ್ರ ಸಿಂಗ್ ಮೃತರಾಗಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವಂತೆ, ಮರಳು ಗಣಿಗಾರಿಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಭರತ್ ಸಿಂಗ್ ನೇತೃತ್ವದ ಠಾಕೂರ್ ಬಣ ಹಾಗೂ ತ್ರಿಪಾಠಿ ಕುಟುಂಬದ ನಡುವೆ ದೀರ್ಘಕಾಲದಿಂದ ಹಗೆತನವಿತ್ತು. ಮಂಗಳವಾರ ರಾತ್ರಿ ಫೋನ್ ಕರೆಯಲ್ಲಿ ಮಾತನಾಡಿ ಉಭಯ ಬಣಗಳು ಭೇಟಿಯಾಗಲು ತೆರಳಿದ್ದಾಗ ಈ ಹಿಂಸಾಚಾರ ಭುಗಿಲೆದ್ದಿದೆ.
ದಾಳಿಕೋರರು ಸಂತ್ರಸ್ತರ ಫಾರ್ಚೂನರ್ ಕಾರಿಗೆ ಟಿಪ್ಪರ್‌ನಿಂದ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಬಾಗಿಲುಗಳು ಲಾಕ್ ಆಗಿವೆ. ತಕ್ಷಣವೇ ಕಾರಿಗೆ ಬೆಂಕಿ ಹಚ್ಚಲಾಗಿದ್ದು, ಬಿಜೆಪಿ ಮುಖಂಡ ಭರತ್ ಸಿಂಗ್ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನಾಗೇಂದ್ರ ಸಿಂಗ್ ಮತ್ತು ವೀರೇಂದ್ರ ಪ್ರತಾಪ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಎರಡನೇ ಕಾರಿನಲ್ಲಿದ್ದ ಇತರ ಕೆಲವರಿಗೂ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳ ಆರೋಪದ ಪ್ರಕಾರ, ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಈ ಕುರಿತು ವಿಧಿವಿಜ್ಞಾನ (Forensic) ವರದಿ ನಿರೀಕ್ಷಿಸಲಾಗಿದೆ.
ಘಟನಾ ಸ್ಥಳಕ್ಕೆ ಸರ್ಗುಜಾ ರೇಂಜ್ ಐಜಿ ದೀಪಕ್ ಝಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಕೊಲೆ, ಕೊಲೆ ಯತ್ನ ಹಾಗೂ ಬೆಂಕಿ ಹಚ್ಚಿದ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಆರೋಪಿಗಳ ಪೈಕಿ ಅಕ್ಷತ್ ತ್ರಿಪಾಠಿ, ವಿಶಾಲ್ ತ್ರಿಪಾಠಿ, ಸತ್ಯಪ್ರಕಾಶ್ ತ್ರಿಪಾಠಿ ಮತ್ತು ಮನ್ನು ತ್ರಿಪಾಠಿ ಎಂಬ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ. ಈ ಘಟನೆ ರಾಜ್ಯದಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದು, ಮರಳು ಮಾಫಿಯಾದ ಅಟ್ಟಹಾಸಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
PublicNext
19/06/2026 05:24 pm