ಬೆಂಗಳೂರು: ಆತ ಖಾಕಿ ಧರಿಸಿ ಜನರ ರಕ್ಷಣೆ ಮಾಡಬೇಕಾದ ಪೊಲೀಸಪ್ಪ. ಆದ್ರೆ ತನ್ನ ಘನತೆ, ಕರ್ತವ್ಯ ಮರೆತು ಮಾಡಬಾರದ ಕೆಲಸ ಮಾಡಿಬಿಟ್ಟಿದ್ದಾನೆ. ರಕ್ಷಕನೇ ಭಕ್ಷಕನಾದ್ರೆ ಹೆಂಗೆ ಅನ್ನೋದಕ್ಕೆ ಮಡಿವಾಳದಲ್ಲಿ ನಡೆದಿರೋ ಈ ಪ್ರಕರಣ ಸಾಕ್ಷಿಯಾಗಿದೆ. ಕೇರಳ ಮೂಲದ ಯುವಕರನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ದರೋಡೆ ಮಾಡಿ ಸಿಐಡಿ ಪೊಲೀಸ್ ಇನ್‌ಸ್ಪೆಕ್ಟರ್ ಎಸ್ಕೇಪ್ ಆಗಿದ್ದಾನೆ. ಪೊಲೀಸ್ ಜೀಪ್, ಅಸಲಿ ಐಡಿ ಕಾರ್ಡ್ ತೋರಿಸಿಯೇ ಈ ಖದೀಮ ಖತರ್ನಾಕ್ ಕೆಲಸ ಮಾಡಿದ್ದಾನೆ. ಈ ಬೇಲಿಯೆ ಎದ್ದು ಹೊಲ ಮೇಯ್ದ ಕಥೆಯ ಕಂಪ್ಲೀಟ್ ಡಿಟೇಲ್ಸ್ ಹೇಳ್ತಿವಿ ನೋಡಿ.
ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಡೀ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಹ ಘಟನೆ ನಡೆದಿದೆ. ಕೇರಳದ ಯುವಕರಿಂದ ಪೊಲೀಸಪ್ಪನೇ ಹಣ ದರೋಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೇರಳದ ಯುವಕರು ಸಾಕಷ್ಟು ಹಣದೊಂದಿಗೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹೋಟೆಲ್‌ಗೆ ಬಂದಿದ್ದರು. ಇದಕ್ಕೆ ಹೊಂಚು ಹಾಕಿ ಕೂತು ಅಲ್ಲಿಗೆ ಎಂಟ್ರಿ ಕೊಟ್ಟಿದ್ದು ಬೇರೆ ಯಾರೂ ಅಲ್ಲ, ಖುದ್ದು ಸಿಐಡಿ ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿ ಮತ್ತವನ ಗ್ಯಾಂಗ್. ಇನ್ಸ್ಪೆಕ್ಟರ್ ಸೂಚನೆಯಂತೆ ಕುಪೇಂದ್ರ ಮತ್ತು ಕುಮಾರ್ ಎಂಬುವವರು ಹೋಟೆಲ್ ರೂಮ್‌ಗೆ ನುಗ್ಗಿದ್ದಾರೆ. ನಾವು ಪೊಲೀಸರು, ನೀವು ಮನಿ ಟ್ರೇಡಿಂಗ್ ಕಳ್ಳದಂಧೆ ಮಾಡ್ತಿದ್ದೀರಾ ಎಂದು ಹೆದರಿಸಿ, ಐಡಿ ಕಾರ್ಡ್ ತೋರಿಸಿ ಅರೆಸ್ಟ್ ಮಾಡುವುದಾಗಿ ಹೇಳಿದ್ದಾರೆ. ನಿಮ್ಮನ್ನು ಸುಮ್ಮನೆ ಬಿಡಬೇಕು ಅಂದ್ರೆ ಹಣ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ. ಯುವಕರು ಹಣ ನೀಡಲು ನಿರಾಕರಿಸಿದಾಗ ಅವರ ಮೇಲೆ ಹಲ್ಲೆ ನಡೆಸಿ ಬರೋಬ್ಬರಿ 20 ಲಕ್ಷ ರೂಪಾಯಿಯನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಇದಾದ ಮೇಲೆ ತಾವು ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ಕೇರಳದ ಯುವಕರು ಮಡಿವಾಳ ಠಾಣೆಗೆ ಘಟನೆ ಬಗ್ಗೆ ದೂರು ನೀಡಿದ್ದಾರೆ. ಆದರೆ ಟ್ವಿಸ್ಟ್ ಏನೆಂದರೆ, ದರೋಡೆ ನಡೆಯುವಾಗ ಯುವಕರು ರಹಸ್ಯವಾಗಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದರು. ಈ ವಿಡಿಯೋ ಸಾಕ್ಷ್ಯ ಮತ್ತು ಸಿಸಿಟಿವಿ ಆಧರಿಸಿ ಡಿಸಿಪಿ ಮೊಹಮ್ಮದ್ ಸುಜೀತಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ತಕ್ಷಣವೇ ಕುಪೇಂದ್ರ ಎಂಬಾತನನ್ನು ಬಂಧಿಸಿದೆ. ಈ ವೇಳೆ ಕುಪೇಂದ್ರ ಬಾಯಿಬಿಟ್ಟ ಸತ್ಯ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ತಾನು ಸಿಐಡಿ ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿ ಸೂಚನೆಯಂತೆ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ದರೋಡೆಗೆ ಅಸಲಿ ಸಿಐಡಿ ಪೊಲೀಸ್ ಜೀಪ್ ಅನ್ನೇ ಬಳಸಲಾಗಿದ್ದು, ಸದ್ಯ ಪೊಲೀಸರು ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿ ಬಳಸುತ್ತಿದ್ದ ಸರ್ಕಾರಿ ವಾಹನವನ್ನು ಸೀಜ್ ಮಾಡಿದ್ದಾರೆ. ಹಣ ಸಹ ರಿಕವರಿ ಮಾಡಲಾಗಿದ್ದು, ಎಫ್‌ಐಆರ್ ದಾಖಲಾಗುತ್ತಿದ್ದಂತೆ ಇನ್‌ಸ್ಪೆಕ್ಟರ್ ಮಹೇಶ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಇದರ ಜೊತೆಗೆ ದೂರುದಾರರು ಹೋಟೆಲ್‌ಗೆ ಅಷ್ಟೊಂದು ಹಣ ತಂದಿದ್ದರ ಹಿನ್ನೆಲೆ ಹಾಗೂ ಅದರ ಮೂಲದ ಬಗ್ಗೆಯೂ ತನಿಖೆ ಮುಂದುವರೆದಿದೆ.
ಸದ್ಯಕ್ಕೆ ಇಲಾಖೆಯ ಮಾನ ಹರಾಜು ಹಾಕಿದ ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಒಂದೆಡೆ ದರೋಡೆಕೋರ ಇನ್‌ಸ್ಪೆಕ್ಟರ್ ಪತ್ತೆಗೆ ಶೋಧ ನಡೆಯುತ್ತಿದ್ದರೆ, ಇನ್ನೊಂದೆಡೆ ದೂರುದಾರರು ತಂದಿದ್ದ ಹಣದ ಮೂಲ ಯಾವುದು. ಅದು ಹವಾಲಾ ಹಣವೇ ಅಥವಾ ಬೇರೆ ದಂಧೆಯದ್ದೇ ಎಂಬ ಆಯಾಮದಲ್ಲೂ ತನಿಖೆ ಚುರುಕುಗೊಂಡಿದೆ. ಅದೆನೇ ಹೇಳಿ. ಕಾನೂನು ರಕ್ಷಕನೇ ಭಕ್ಷಕನಾದ ಈ ಪ್ರಕರಣ ಸದ್ಯ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
PublicNext
19/06/2026 06:08 pm