ಹುಬ್ಬಳ್ಳಿ: ಒಳಾಂಗಣ, ಹೊರಾಂಗಣ ಕ್ರೀಡೆಗಳಿಗೆ ತರಬೇತಿ ನೀಡುವುದರ ಜೊತೆಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳನ್ನು ಆಯೋಜಿಸುವ ಉದ್ದೇಶದಿಂದ ಗೋಕುಲ ರಸ್ತೆಯ ಡಾ.ಆರ್.ಎಂ. ಲೋಹಿಯಾ ನಗರದಲ್ಲಿ ನಿರ್ಮಿಸಲಾಗುತ್ತಿರುವ ಕ್ರೀಡಾ ಸಂಕೀರ್ಣ (ಇಂಟಿಗ್ರೇಟೆಡ್ ಸ್ಪೋರ್ಟ್ಸ್ ಸ್ಟೇಡಿಯಂ ಕಾಂಪ್ಲೆಕ್ಸ್) ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಶೀಘ್ರವಾಗಿ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವೀಕ್ಷಣೆ ಮಾಡಿದರು.
ದೇಶದ ವಿವಿಧ ಮಹಾನಗರಗಳಲ್ಲಿ ಕೆಲವು ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಿಗೆ ತರಬೇತಿ ನೀಡುವ ಕ್ರೀಡಾ ಸಂಕೀರ್ಣಗಳಿವೆ. ಆದರೆ, ಒಂದೇ ಸೂರಿನಡಿ 16 ಒಳಾಂಗಣ ಹಾಗೂ 6 ಹೊರಾಂಗಣ ಕ್ರೀಡೆಗಳಿಗೆ ತರಬೇತಿ ನೀಡುವ, ಸುಮಾರು 15 ಎಕರೆ ವಿಸ್ತೀರ್ಣದ ಕ್ರೀಡಾ ಸಂಕೀರ್ಣ ಕಟ್ಟಡಗಳಲ್ಲಿ ಹುಬ್ಬಳ್ಳಿಯ ಇಂಟಿಗ್ರೇಟೆಡ್ ಸ್ಪೋರ್ಟ್ಸ್ ಸ್ಟೇಡಿಯಂ ಕಾಂಪ್ಲೆಕ್ಸ್ ಸಹ ಒಂದು ಎಂಬುದು ಹೆಮ್ಮೆಯ ಸಂಗತಿ. ಕಳೆದ ಕೆಲವು ವರ್ಷಗಳಿಂದ ಕ್ರೀಡೆಗಳಿಗೆ ಪ್ರೋತ್ಸಾಹ ಹೆಚ್ಚಾಗಿ ಸಿಗುತ್ತಿರುವುದರಿಂದ ಭಾರತದ ಕ್ರೀಡಾಪಟುಗಳು ಒಲಿಂಪಿಕ್ಸ್ ನಲ್ಲಿ ಹೆಚ್ಚು ಪದಕಗಳನ್ನು ಬಾಚುತ್ತಿದ್ದಾರೆ. ಉತ್ತರ ಕರ್ನಾಟಕವೂ ಸೇರಿ ರಾಜ್ಯ ಹಾಗೂ ಸುತ್ತಲಿನ ರಾಜ್ಯಗಳ ಕ್ರೀಡಾಪಟುಗಳಿಗೆ ದೆಹಲಿ, ಮುಂಬೈನಂತಹ ಮಹಾನಗರಗಳಿಗೆ ತೆರಳಿ, ತರಬೇತಿ ಪಡೆಯುವುದು ವೆಚ್ಚದಾಯಕವಾಗಿದೆ. ಅಂತಹ ಕ್ರೀಡಾಪಟುಗಳಿಗೆ ಹುಬ್ಬಳ್ಳಿಯ ಕ್ರೀಡಾ ಸಂಕೀರ್ಣ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್ ಸಿಟಿ ಕಂಪನಿಯು 160 ಕೋಟಿ ರೂ. ವೆಚ್ಚದಲ್ಲಿ ಈ ಸ್ಟೇಡಿಯಂ ಕಾಂಪ್ಲೆಕ್ಸ್ ನಿರ್ಮಿಸುತ್ತಿದ್ದು, ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಬೆಂಗಳೂರು ಮೂಲದ ಕೆಎಂವಿ ಪ್ರಾಜೆಕ್ಟ್ ಹೆಸರಿನ ಗುತ್ತಿಗೆದಾರರು ಕ್ರೀಡಾ ಸಂಕೀರ್ಣ ನಿರ್ಮಿಸುತ್ತಿದ್ದು, 2022ರ ಏಪ್ರಿಲ್‌ನಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಜಿ-ಪ್ಲಸ್-3 (ನೆಲಮಹಡಿ ಹಾಗೂ ಮೂರಂತಸ್ತು) ಮಾದರಿಯ ಈ ಕಟ್ಟಡದಲ್ಲಿ ಒಟ್ಟು 5 ಬ್ಲಾಕ್‌ಗಳು ನಿರ್ಮಾಣಗೊಂಡಿವೆ. ಒಳಾಂಗಣ ಕ್ರೀಡೆಗಳಾದ ಟೇಬಲ್ ಟೆನಿಸ್, ಕೇರಂ, ಪೂಲ್ ಟೇಬಲ್, ಬಿಲಿಯರ್ಡ್ಸ್ ಟೇಬಲ್, ಸ್ನೂಕರ್ ಟೇಬಲ್, ಬ್ಯಾಡ್ಮಿಂಟನ್ ಕೋರ್ಟ್, ಫ್ಲ್ಯಾಶ್ ಕೋರ್ಟ್, ಶೂಟಿಂಗ್, ಮಾರ್ಷಲ್ ಆರ್ಟ್ಸ್, ಕುಸ್ತಿ, ಕಬಡ್ಡಿ, ಬಿಲ್ಲುವಿದ್ಯೆ, ಸ್ಟೇಟಿಂಗ್, ಈಜುಕೊಳದ ಸೌಲಭ್ಯಗಳಿವೆ. ಹೊರಾಂಗಣದಲ್ಲಿ ಫುಟ್‌ಬಾಲ್, ಹಾಕಿ, ಖೋ ಖೋ,
ಅಥ್ಲೆಟಿಕ್ ಟ್ರಾಕ್, ಟೆನಿಸ್, ವಾಲಿಬಾಲ್ ಆಟಕ್ಕೆ ಅವಕಾಶವಿದೆ.
ಒಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಈ ಕ್ರೀಡಾ ಸಂಕೀರ್ಣ ಬಹಳ ಅನುಕೂಲಕರವಾಗಲಿದೆ. ಇದನ್ನಾದರೂ ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡಿ ಪ್ರತಿಭಾವಂತರಿಗೆ ಪೂರಕ ವೇದಿಕೆಯಾಗಿ ಮಾಡಬೇಕಿದೆ.
-ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/06/2026 07:05 pm