ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಂಬೇಡ್ಕರ್ ಬದುಕು, ತತ್ವಗಳು ಮತ್ತು ಆದರ್ಶಗಳು ಇಂದಿಗೂ ಪ್ರಸ್ತುತ - ಚಂದ್ರಕಾಂತ ಕಾದ್ರೋಳ್ಳಿ

ಧಾರವಾಡ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಬದುಕು, ತತ್ವಗಳು ಮತ್ತು ಆದರ್ಶಗಳು ಇಂದಿಗೂ ಸಾರ್ವಕಾಲಿಕವಾಗಿ ಪ್ರತಿಯೊಬ್ಬರಿಗೂ ದಾರಿ ದೀಪವಾಗಿವೆ. ಡಾ.ಬಿ.ಆರ್ ಅಂಬೇಡ್ಕರ್ ನೀಡಿದ ಸಂವಿಧಾನದ ಆಶಯಗಳನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ ತಿಳಿಸಿದರು.

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಸಂಘಟನೆ ವತಿಯಿಂದ ನಡೆದ ದಲಿತ ಜಾಗೃತಿ ಜನಾಂದೋಲನ ರಾಜ್ಯ ಮಟ್ಟದ ಸಮಾವೇಶ ಹಾಗೂ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ದಲಿತರಿಗೆ ಸಾಮಾಜಿಕ ನ್ಯಾಯ, ಭೂಮಿ, ಶಿಕ್ಷಣ ಮತ್ತು ಸಮಾನತೆಯನ್ನು ದೊರಕಿಸಿಕೊಡುವುದು ಹಾಗೂ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಬಸವ ಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ದಲಿತ ಜನಾಂದೋಲನವು ಭಾರತದಲ್ಲಿನ ಶತಮಾನಗಳ ಜಾತಿ ಶೋಷಣೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಸಾಮಾಜಿಕ ಸಮಾನತೆ, ಮಾನವ ಘನತೆ ಹಾಗೂ ಸಾಂವಿಧಾನಿಕ ಹಕ್ಕುಗಳನ್ನು ಸಾಧಿಸಲು ಆರಂಭವಾದ ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ಚಳುವಳಿಯಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, ದುರ್ಬಲ ವರ್ಗದವರ ಶೋಷಣೆಯನ್ನು ತಡೆಯಲು ಆರ್ಥಿಕ ಸಮಾನತೆ ಅತ್ಯಗತ್ಯ. ಕೃಷಿ ಸುಧಾರಣೆ ಮತ್ತು ಕೈಗಾರೀಕರಣದ ಮೂಲಕ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳು ಸಿಗಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೋರಾಟ ನಡೆಸಿದ್ದರು. ಅವರ ಹಾದಿಯಲ್ಲೇ ದಲಿತ ಸಂಘರ್ಷ ಸಮಿತಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಉದ್ಯಮಿ ಮಂಜುನಾಥ ಮಕ್ಕಳಗೇರಿ, ದಲಿತ ಸಂಘರ್ಷ ಸಮಿತಿ ಗೌರವ ಅಧ್ಯಕ್ಷ ಬಸವರಾಜ ಮಾರಡಗಿ, ವಿಭಾಗೀಯ ಅಧ್ಯಕ್ಷ ಶರೀರ ಹರಿಜನ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಮಾಲಾ ತುರವಿಹಾಳ, ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಲಗಮ್ಮನವರ ಸೇರಿದಂತೆ ಇತರರು ಭಾಗವಹಿಸಿದ್ದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/06/2026 05:43 pm

Cinque Terre

79.91 K

Cinque Terre

0

ಸಂಬಂಧಿತ ಸುದ್ದಿ