ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡೂರು: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ - ಕಾಮುಕ ಶಿಕ್ಷಕನಿಗೆ ಸಾಥ್, ಮುಖ್ಯಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್

ಕಡೂರು: ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಕಾಮುಕ ಸಹ ಶಿಕ್ಷಕ ಹಾಗೂ ಆತನಿಗೆ ಸಾಥ್ ನೀಡಿದ ಮುಖ್ಯಶಿಕ್ಷಕನ ವಿರುದ್ಧ ಕಠಿಣ ಕಾಯ್ದೆಗಳ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕಳೆದ ಕೆಲವು ದಿನಗಳಿಂದ ಶಾಲೆಯ ಸಹ ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯರೊಂದಿಗೆ ನಿರಂತರವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಆರೋಪಿ ಶಿಕ್ಷಕನು ವಿದ್ಯಾರ್ಥಿನಿಯೊಬ್ಬಳಿಗೆ ಮೊಬೈಲ್ ತರುವಂತೆ ಒತ್ತಾಯಿಸಿ, ಆಕೆಯ ಸಂಖ್ಯೆಗೆ ಅಶ್ಲೀಲ ವೀಡಿಯೊ ಹಾಗೂ ಸಂದೇಶಗಳನ್ನು ಕಳುಹಿಸಿದ್ದಲ್ಲದೆ, ಒಳ ಉಡುಪು ಧರಿಸಿದ್ದಾಳೆಯೇ ಎಂದು ಪರೀಕ್ಷಿಸುವ ನೆಪದಲ್ಲಿ ವಿಕೃತವಾಗಿ ವರ್ತಿಸಿದ್ದಾನೆ. ಈ ದೌರ್ಜನ್ಯದಿಂದ ಭಯಭೀತಳಾದ ಬಾಲಕಿ ಶಾಲೆಗೆ ಹೋಗಲು ನಿರಾಕರಿಸಿದಾಗ ಹೆತ್ತವರು ವಿಚಾರಿಸಿದ್ದು, ಈ ವೇಳೆ ಶಿಕ್ಷಕನ ಅಸಭ್ಯ ವರ್ತನೆ ಹಾಗೂ ದೇವರ ಮೇಲೆ ಆಣೆ ಮಾಡಿಸಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ವಿಚಾರ ಬೆಳಕಿಗೆ ಬಂದಿದೆ. ಇದೇ ರೀತಿ ಶಾಲೆಯ ಇತರ ಇಬ್ಬರು ವಿದ್ಯಾರ್ಥಿನಿಯರಿಗೂ ಈತ ಕಿರುಕುಳ ನೀಡಿರುವುದು ಪೋಷಕರ ಗಮನಕ್ಕೆ ಬಂದಿದೆ.

ಈ ಗಂಭೀರ ವಿಷಯದ ಬಗ್ಗೆ ಪೋಷಕರು ಶಾಲೆಯ ಮುಖ್ಯ ಶಿಕ್ಷಕನಿಗೆ ದೂರು ನೀಡಿದ್ದರೂ, ಅವರು ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ ಹಾಗೂ ಯಾವುದೇ ತುರ್ತು ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿದ್ದಾರೆ. ವಿಷಯ ತಿಳಿದು ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಭೆ ನಡೆಸಿದ್ದಾರೆ. ಪೋಷಕರ ಆತಂಕ ಮತ್ತು ಅಧಿಕಾರಿಗಳ ತನಿಖಾ ವರದಿಯ ಆಧಾರದ ಮೇಲೆ ಬಿಇಒ ಅವರು ನೀಡಿದ ಅಧಿಕೃತ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಸಹ ಶಿಕ್ಷಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ಪೋಕ್ಸೋ ಕಾಯ್ದೆ, ಐಟಿ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ (SC/ST Act) ಮೊಕದ್ದಮೆ ಹೂಡಲಾಗಿದ್ದು, ಘಟನೆಯನ್ನು ಮುಚ್ಚಿಡಲು ಯತ್ನಿಸಿದ ಮುಖ್ಯ ಶಿಕ್ಷಕನನ್ನೂ ಆರೋಪಿಯನ್ನಾಗಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Edited By : Vijay Kumar
PublicNext

PublicNext

20/06/2026 07:27 pm

Cinque Terre

2.39 K

Cinque Terre

1

ಸಂಬಂಧಿತ ಸುದ್ದಿ