ಚಿಕ್ಕಮಗಳೂರು: ಮನೆಯ ಹೊರಗಿದ್ದ ಶೂ ಒಳಗೆ ಬೀಗದ ಕೀ ಇಟ್ಟು ದೇವಸ್ಥಾನಕ್ಕೆ ಹೋಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರ ಮನೆಗೆ uಕಳ್ಳರು ಕನ್ನ ಹಾಕಿದ ಘಟನೆ ರಾಮನಹಳ್ಳಿಯ ಪೊಲೀಸ್ ವಸತಿಗೃಹದಲ್ಲಿ ನಡೆದಿದೆ. ಚಿಕ್ಕಮಗಳೂರು ಡಿವೈಎಸ್ಪಿ ಕಚೇರಿ ಸಿಬ್ಬಂದಿ ಅಣ್ಣಪ್ಪ ಎಂಬುವರ ಪತ್ನಿ ಬಿ.ಎಂ. ಬಿಂದು ಈ ಬಗ್ಗೆ ದೂರು ನೀಡಿದ್ದಾರೆ.
ಜೂನ್ 15ರಂದು ಮಗನ ಹುಟ್ಟುಹಬ್ಬದ ದಿನ ಬಿಂದು ಅವರು ಪಕ್ಕದ ಮನೆಯವರೊಂದಿಗೆ ಮಲ್ಲೇನಹಳ್ಳಿ ದೇವಿರಮ್ಮ ದೇವಸ್ಥಾನಕ್ಕೆ ಹೋಗಲು ನಿರ್ಧರಿಸಿ, ಪತಿ ಕಚೇರಿಯಿಂದ ಬಂದರೆ ಅನುಕೂಲವಾಗಲಿ ಎಂದು ಕೀಯನ್ನು ಮನೆಯ ಮುಂಭಾಗದ ಶೂ ಒಳಗೆ ಬಚ್ಚಿಟ್ಟು ಹೋಗಿದ್ದರು. ಮಧ್ಯಾಹ್ನ ವಾಪಸ್ ಬಂದು ನೋಡಿದಾಗ ಕಳ್ಳತನದ ಯಾವುದೇ ಲಕ್ಷಣಗಳು ತಕ್ಷಣಕ್ಕೆ ಮೇಲ್ನೋಟಕ್ಕೆ ಕಾಣದಿದ್ದರೂ, ಸಂಜೆ ಮಗನಿಗೆ ಬರ್ತ್‌ಡೇ ಕೇಕ್ ಕತ್ತರಿಸುವಾಗ ಒಡವೆ ಧರಿಸಲು ಬೀರು ಪರಿಶೀಲಿಸಿದಾಗ ಕಳ್ಳತನ ಬಯಲಾಗಿದೆ.
ಬೀರುವಿನ ಇಂಟರ್ ಲಾಕ್ ತೆರೆದು ₹8 ಲಕ್ಷ ಮೌಲ್ಯದ 24 ಗ್ರಾಂ ಚಿನ್ನದ ಬ್ರೇಸ್‌ಲೆಟ್, 21 ಗ್ರಾಂ ಚಿನ್ನದ ಸರ ಹಾಗೂ 3 ಗ್ರಾಂನ ಗಣೇಶ ಮೂರ್ತಿ ಪೆಂಡೆಂಟ್ ಸೇರಿ ಒಟ್ಟು 48 ಗ್ರಾಂ 8 ಲಕ್ಷ ಮೌಲ್ಯದ ಆಭರಣಗಳನ್ನು ಕಳವು ಮಾಡಲಾಗಿದೆ. ಆಶ್ಚರ್ಯ ಎಂದರೆ ಉಳಿದಿದ್ದ ಚಿನ್ನವನ್ನು ಕಳ್ಳರು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬೀಗದ ಕೀ ಇಟ್ಟಿದ್ದನ್ನು ಗಮನಿಸಿದವರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಬಸವನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Kshetra Samachara
19/06/2026 11:18 pm
LOADING...