ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 30 ಕೋಟಿ ಬಿಸಿನೆಸ್ ಆಮಿಷ, 2.66 ಕೋಟಿ ವಂಚನೆ - ಬ್ಯಾಂಕ್ ಮ್ಯಾನೇಜರ್ ಸೇರಿ ಮೂವರು ಅರೆಸ್ಟ್

ಬೆಂಗಳೂರು: ಲಾಜಿಸ್ಟಿಕ್ ಕಂಪನಿ ಮಾಲೀಕನ ಸೋಗಿನಲ್ಲಿ ಕರೆ ಮಾಡಿ ಬಿಸಿನೆಸ್ ಕೊಡುವುದಾಗಿ ಆಸೆ ಹುಟ್ಟಿಸಿ ಕಮಿಷನ್ ರೂಪದಲ್ಲಿ ವ್ಯಕ್ತಿಯಿಂದ 2.66 ಕೋಟಿ ಹಣ ಪಡೆದು ವಂಚಿಸಿದ್ದ ಆರೋಪದಡಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಮೂವರು ಆರೋಪಿಗಳನ್ನ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಂಚನೆಗೊಳಗಾದ ಸುಬ್ರಮಣ್ಯ ಎಂಬುವರು ನೀಡಿದ ದೂರಿನ ಮೇರೆಗೆ ಹೆಸರಘಟ್ಟ ಶಾಖೆಯ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ವಿನೋದ್ ಕುಮಾರ್, ಈತನ ಸಹಚರರಾದ ಅರುಣ್ ಹಾಗೂ ಕಿರಣ್ ಎಂಬುವರನ್ನ ಬಂಧಿಸಿ ಜೂನ್ 25ರವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ಚುರುಕುಗೊಳಿಸಲಾಗಿದೆ. ವಂಚನೆಯಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು, ಬಂಧನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರ ಸುಬ್ರಮಣ್ಯ ಅವರು ಲಾಜಿಸ್ಟಿಕ್ ಮತ್ತು ಮ್ಯಾನ್ ಪವರ್ ಸರ್ವೀಸ್ ಹೆಸರಿನ ಕಂಪನಿಯೊಂದರ ಮಾಲೀಕರಾಗಿದ್ದಾರೆ. ನೆಲಮಂಗಲದಲ್ಲಿರುವ ಸಂಬಂಧಿಯ ಹೆಸರಿನ ಕಂಪನಿಗೆ ಉಸ್ತುವಾರಿಯಾಗಿದ್ದರು. ಹಣಕಾಸು ವ್ಯವಹಾರಕ್ಕಾಗಿ ಹೆಸರಘಟ್ಟ ಶಾಖೆಯ ಆಕ್ಸಿಸ್ ಬ್ಯಾಂಕ್ ನಲ್ಲಿ ಖಾತೆ ತೆರೆದಿದ್ದರು. ಕೆಲಸ ನಿಮಿತ್ತ ಆಗಾಗ ಬ್ಯಾಂಕ್ ಹೋಗಿ ಬರುತ್ತಿದ್ದ ಸುಬ್ರಮಣ್ಯ ಅವರಿಗೆ ಬ್ಯಾಂಕ್ ಮ್ಯಾನೇಜರ್ ವಿನೋದ್ ಪರಿಚಯವಾಗಿದೆ. ಕಂಪನಿಯ ವ್ಯವಹಾರ ಬಗ್ಗೆ ಅರಿತಿದ್ದ ವಿನೋದ್, ದೂರುದಾರರ ಮೊಬೈಲ್ ನಂಬರ್ ಪಡೆದುಕೊಂಡಿದ್ದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ರಾಹುಲ್ ಹೆಸರಿನಲ್ಲಿ ಕರೆ ಮಾಡಿದ ವಿನೋದ್, ಲಾಜಿಸ್ಟಿಕ್ ಹಾಗೂ ಮ್ಯಾನ್ ಪವರ್ ಸೇರಿದಂತೆ ಇನ್ನಿತರ ವ್ಯವಹಾರ ಮಾಡುತ್ತಿದ್ದೇನೆ. ಒಂದು ವರ್ಷದೊಳಗೆ ಸುಮಾರು 25ರಿಂದ 30 ಕೋಟಿ ಬಿಸಿನೆಸ್ ಕೊಡುವುದಾಗಿ ಆಸೆ ಹುಟ್ಟಿಸಿದ್ದ. ಮುಂಗಡವಾಗಿ ಶೇ.10ರಷ್ಟು ಕಮಿಷನ್ ಹಣ ಕೊಡುವಂತೆ ಕೇಳಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಫೋನ್ ಕರೆಯಲ್ಲಿ ಮಾತನಾಡುವಾಗ ದೂರುದಾರರಿಗೆ ಬ್ಯಾಂಕ್ ಮ್ಯಾನೇಜರ್ ವಿನೋದ್ ಅವರ ಧ್ವನಿ ಎಂಬಂತೆ ಭಾಸವಾದರೂ ಅನುಮಾನ ಪಡದೆ ಕಳೆದ ಫೆಬ್ರುವರಿಯಿಂದ 2.66 ಕೋಟಿ ಹಣವನ್ನ ಆರ್‌ಟಿಜಿಎಸ್ ಮೂಲಕ ಮಲ್ಲಿಕಾರ್ಜುನ್ ಎಂಬುವನ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದ್ದರು.

ಹಣ ನೀಡಿ ಕೆಲ ತಿಂಗಳಾದರೂ ಯಾವುದೇ ಬಿಸಿನೆಸ್ ಕೊಟ್ಟಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಸಬೂಬು ಹೇಳಿಕೊಂಡು ಮುಂದೂಡುತ್ತಿದ್ದ. ಅನುಮಾನಗೊಂಡು ಪರಿಶೀಲಿಸಿದಾಗ ರಾಹುಲ್ ಹೆಸರಿನಲ್ಲಿ ವಿನೋದ್ ಎಂಬಾತನ್ನ ತನ್ನನ್ನ ಪುಸಲಾಯಿಸಿ ಬೇರೆ ವ್ಯಕ್ತಿಯಂತೆ ಮಾತನಾಡಿ ಕೋಟ್ಯಂತರ ರೂಪಾಯಿ ಮೋಸ ಮಾಡಿದ್ದಾನೆ ಎಂದು ದೂರು ನೀಡಿದ ಮೇರೆಗೆ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Edited By : Vijay Kumar
PublicNext

PublicNext

20/06/2026 11:07 pm

Cinque Terre

2.22 K

Cinque Terre

0

ಸಂಬಂಧಿತ ಸುದ್ದಿ