ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಿಹ್ಯಾಬ್ ವಲಯದಲ್ಲಿ ನಡುಕ - ಮಾಲೀಕನ ಹತ್ಯೆ ಬೆನ್ನಲ್ಲೇ ಇತರ ಸಂಸ್ಥೆಗಳ ಪರಿಶೀಲನೆಗೆ ಸೂಚನೆ!

ಬೆಂಗಳೂರು: ಚಂದ್ರಲೇಔಟ್‌ನ 'ನ್ಯೂ ಲೈಫ್ ರಿಹ್ಯಾಬ್' ಮಾಲೀಕ ಶಿವಲಿಂಗಯ್ಯ ಅವರ ಕೊಲೆ ಪ್ರಕರಣ ತೀವ್ರ ಸಂಚಲನ ಮೂಡಿಸಿದೆ. ಈ ಕೊಲೆಯ ಬೆನ್ನಲ್ಲೇ ರಾಜ್ಯದ ಇತರ ರಿಹ್ಯಾಬ್ ಮಾಲೀಕರಲ್ಲಿ ತೀವ್ರ ಆತಂಕ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಇತರೆ ರಿಹ್ಯಾಬ್‌ಗಳ ಪೂರ್ವಾಪರ ಪರಿಶೀಲಿಸಲು ಸೂಚನೆ ನೀಡಲಾಗಿದೆ. ಇದುವರೆಗೆ ರಿಹ್ಯಾಬ್‌ಗಳಲ್ಲಿ ಚಟದಿಂದ ಮುಕ್ತಿ ಪಡೆಯಲು ಬಂದಿದ್ದ ವ್ಯಕ್ತಿಗಳು ಮಾಲೀಕರ ಕಿರುಕುಳಕ್ಕೆ ಒಳಗಾಗುತ್ತಿದ್ದ ಆರೋಪಗಳಿದ್ದವು. ಆದರೆ, ಇದೀಗ ಮಾಲೀಕನ ಕೊಲೆ ಪ್ರಕರಣವು ರಿಹ್ಯಾಬ್ ವಲಯದಲ್ಲಿ ಹೊಸ ರೀತಿಯ ನಡುಕ ಸೃಷ್ಟಿಸಿದೆ.

ನ್ಯೂ ಲೈಫ್ ರಿಹ್ಯಾಬ್ ಮಾಲೀಕ ಶಿವಲಿಂಗಯ್ಯ ಕೊಲೆಯ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ರಿಹ್ಯಾಬ್‌ನಲ್ಲಿದ್ದ ನಿತಿನ್ ಎಂಬಾತನನ್ನು ಬಿಡಿಸಿಕೊಂಡು ಹೋಗುವ ಉದ್ದೇಶದಿಂದ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಇದು ಪೂರ್ವಯೋಜಿತ ಕೊಲೆಯಾಗಿದ್ದು, ಎಂಟರಿಂದ ಒಂಬತ್ತು ಮಂದಿ ದುಷ್ಕರ್ಮಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಕೊಲೆಗಾರರು ಕೃತ್ಯದ ಬಳಿಕ ಒಂದು ಬ್ಯಾಗ್‌ ಅನ್ನು ತೆಗೆದುಕೊಂಡು ಹೋಗಿದ್ದು, ಆ ಬ್ಯಾಗ್‌ನಲ್ಲಿ ಹಣವಿತ್ತಾ ಅಥವಾ ನಿತಿನ್‌ನ ಬಟ್ಟೆಗಳಿದ್ದವಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ಹಲವು ದಿನಗಳಿಂದಲೇ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಶಿವಲಿಂಗಯ್ಯ ಅವರ ಮಗ ಮತ್ತು ಚಾಲಕ ಇಲ್ಲದ ದಿನವನ್ನು ಆಯ್ದುಕೊಂಡು ದುಷ್ಕರ್ಮಿಗಳು ದಾಳಿ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಪ್ರಕರಣದ ತನಿಖೆಗಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದು, ಕೊಲೆಗಾರರನ್ನು ಪತ್ತೆಹಚ್ಚಲು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದಷ್ಟು ಬೇಗ ಕೊಲೆಗಾರರನ್ನು ಬಂಧಿಸಿ, ಕೊಲೆಯ ಹಿಂದಿನ ನಿಖರ ಕಾರಣವನ್ನು ಬಯಲಿಗೆಳೆಯುವ ಪ್ರಯತ್ನ ನಡೆದಿದೆ.

Edited By :
PublicNext

PublicNext

20/06/2026 04:24 pm

Cinque Terre

2.96 K

Cinque Terre

0

ಸಂಬಂಧಿತ ಸುದ್ದಿ