ಬೆಂಗಳೂರು: ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಅವರೇ ಪೊಲೀಸ್ ಜೀಪಿನಲ್ಲಿ ಬಂದು 20 ಲಕ್ಷ ರೂ. ದರೋಡೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಮೂರು ದಿನಗಳ ಕಾಲ ನಡೆದ ಖತರ್ನಾಕ್ ಪ್ಲಾನ್‌ನ ಭಾಗವಾಗಿತ್ತು ಎನ್ನಲಾಗಿದೆ.
ಇಂಡೋನೇಷ್ಯಾದಲ್ಲಿರುವ ನವೀನ್ ಎಂಬ ವ್ಯಕ್ತಿ, ಕೇರಳದ ಕೆಲವು ಯುವಕರನ್ನು ಬೆಂಗಳೂರಿನ ಶಾಹಿನ್ ಎಂಬಾತನಿಗೆ ಪರಿಚಯಿಸಿದ್ದ. ಬಿಟ್‌ಕಾಯಿನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ದೊಡ್ಡ ಲಾಭ ಗಳಿಸಿಕೊಡುವುದಾಗಿ ಶಾಹಿನ್ ಈ ಯುವಕರಿಗೆ ಆಸೆ ಹುಟ್ಟಿಸಿದ್ದ. ಇದರ ಬೆನ್ನಲ್ಲೇ, ಜೂನ್ 15ರಂದು ಜುನೀಶ್ ಬಾಬು ಮತ್ತು ಸಫೀರ್ ಸೇರಿದಂತೆ ಮೂವರು ಕೇರಳದಿಂದ ಬೆಂಗಳೂರಿಗೆ ಬಂದಿದ್ದರು.
ದರೋಡೆ ನಡೆಸುವುದಕ್ಕೂ ಮುನ್ನ ಕೇರಳದಿಂದ ಬಂದವರನ್ನು ಶಾಹಿನ್ ಎರಡು ಬಾರಿ ಭೇಟಿ ಮಾಡಿದ್ದ. ಮೊದಲ ಭೇಟಿ ಇಂದಿರಾನಗರ ಮತ್ತು ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿತ್ತು.
ಇಂದಿರಾನಗರದಲ್ಲಿ ಅನೀಶ್ ಮತ್ತು ಸಫೀರ್ ಶಾಹಿನ್‌ನನ್ನು ಭೇಟಿಯಾದಾಗ, ಅವರು 10 ಲಕ್ಷ ರೂಪಾಯಿ ಹಣ ತಂದಿದ್ದರು. ಆದರೆ, "10 ಲಕ್ಷ ರೂ. ಸಾಕಾಗುವುದಿಲ್ಲ, 20 ಲಕ್ಷ ರೂ. ತಂದರೆ ಮಾತ್ರ ಬನ್ನಿ" ಎಂದು ಹೇಳಿ ಶಾಹಿನ್ ಅವರನ್ನು ವಾಪಸ್ ಕಳುಹಿಸಿದ್ದ.
ನಂತರ ಶಾಹಿನ್ ಮತ್ತೆ ಕರೆ ಮಾಡಿ, ಮಡಿವಾಳದ ವೆಸ್ಟರ್ನ್ ಕೀ ಹೋಟೆಲ್ ಬಳಿ ಬರುವಂತೆ ಸೂಚಿಸಿದ್ದ. ಅಲ್ಲಿನ ರೂಮ್ ನಂಬರ್ 412ರಲ್ಲಿ ಶಾಹಿನ್‌ನನ್ನು ಭೇಟಿ ಮಾಡಿದ ಅನೀಶ್ ಮತ್ತು ಸಫೀರ್, 20 ಲಕ್ಷ ರೂಪಾಯಿ ಹಣವನ್ನು ಎಣಿಸುತ್ತಿದ್ದರು.
ಸಫೀರ್ ರೂಮ್‌ನ ಹೊರಗಡೆ ಕಾಯುತ್ತಿದ್ದಾಗ, ರೂಮ್‌ನೊಳಗೆ ಹಣ ಎಣಿಕೆ ನಡೆಯುತ್ತಿತ್ತು. ಇದೇ ಸಮಯಕ್ಕೆ, ಕುಪೇಂದ್ರ ರೆಡ್ಡಿ ಮತ್ತು ಆತನ ತಂಡ ರೂಮ್‌ಗೆ ನುಗ್ಗಿ, ಹಣವನ್ನು ದರೋಡೆ ಮಾಡಿದ್ದಾರೆ.
ಈ ದರೋಡೆಗೆ ಕುಪೇಂದ್ರ ರೆಡ್ಡಿ, ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಅವರನ್ನು "ಸೂಪರ್ ಡೀಲ್ ಇದೆ" ಎಂದು ಹೇಳಿ ಕರೆತಂದಿದ್ದ ಎನ್ನಲಾಗಿದೆ. ಕುಪೇಂದ್ರ ರೆಡ್ಡಿಯೇ ಸ್ವತಃ ಪೊಲೀಸ್ ಜೀಪ್ ಚಲಾಯಿಸಿಕೊಂಡು ಬಂದಿದ್ದು, ಜೀಪ್ ಒಳಗೆ ಕುಳಿತಿದ್ದ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಸಂಪೂರ್ಣ ಕಾರ್ಯಾಚರಣೆಯನ್ನು ನಿರ್ವಹಿಸಿದ್ದರು.
ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಇತರೆ ಆರೋಪಿಗಳ ಪಾತ್ರದ ಬಗ್ಗೆ ತನಿಖೆ ಮುಂದುವರೆದಿದೆ.
PublicNext
20/06/2026 03:36 pm