ಮುಂಡರಗಿ: ಆಳೆತ್ತರ ಬೆಳೆದ ಮಹಾಗನಿ, ಸಿಲ್ವರ್ ಓಕ್, ಅತ್ತಿ, ಆಲ, ಗುಲ್ ಮೊಹರ್, ಬಸವನಪಾದ, ಬೇವು, ಬಾದಾಮಿ ಸಸಿಗಳು. ಸಸಿಗಳನ್ನು ಬೆಳೆಸಲು ಬೀಜದೊಂದಿಗೆ ಗೊಬ್ಬರ ಸೇರಿಸಿ ಬ್ಯಾಗ್ ತುಂಬುತ್ತಿರುವ ಕಾರ್ಮಿಕರು. ಈ ದೃಶ್ಯಗಳು ಕಂಡು ಬಂದಿದ್ದು ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿರುವ ಸಾಮಾಜಿಕ ಅರಣ್ಯ ವಲಯದ ಸಸ್ಯಪಾಲನಾ ಕ್ಷೇತ್ರದಲ್ಲಿ. ಹೀಗೆ ತಯಾರಾದ ಈ 26650 ಸಸಿ ತಾಲೂಕಿನಾದ್ಯಂತ ಜಮೀನುಗಳ ಹಸಿರೀಕರಣ, ಪಟ್ಟಣದ ಸೌಂದರ್ಯ ವೃದ್ಧಿ, ಗ್ರಾಮೀಣ ಪ್ರದೇಶದ ರಸ್ತೆಗಳ ಅಂದ ಹೆಚ್ಚಿಸುವುದಕ್ಕಾಗಿಯೇ ಇವುಗಳನ್ನು ಬೆಳೆಸಲಾಗಿದೆ.
ತಾಲೂಕು ಸಾಮಾಜಿಕ ಅರಣ್ಯ ವಲಯದ ವತಿಯಿಂದ ಕೊರ್ಲಹಳ್ಳಿ ಸಸ್ಯಪಾಲನಾ ಕ್ಷೇತ್ರದಲ್ಲಿ 2026-27ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿ ನೆಡುತೋಪು ನಿರ್ಮಾಣಕ್ಕಾಗಿ ಬೆಳೆಸಲಾದ ಈ ಸಸಿಗಳನ್ನು ಸಸ್ಯಪಾಲನಾ ಕ್ಷೇತ್ರದ ಕಾರ್ಮಿಕರು ವಲಯ ಅರಣ್ಯಾಧಿಕಾರಿ ಸುನೀತಾ ಅವರ ಮಾರ್ಗದರ್ಶನದಲ್ಲಿ ಬೆಳೆಸಿರುವುದು ವಿಶೇಷ. ಹೊಂಗೆ ಆಲ ಹತ್ತಿ, ಅರಳಿ, ಮಹಾಗನಿ, ಸಿಲ್ವರ್ ಓಕ್, ನೇರಳೆ, ಹೊಳೆಮತ್ತಿ, ಬೇವು ಸೇರಿದಂತೆ ಮರಗಳು ಈಗಾಗಲೇ ಆಳೆತ್ತರ ಬೆಳೆದು ನಿಂತಿವೆ. ರೈತರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬದು, ಜಮೀನುಗಳಲ್ಲಿ ಬೆಳೆಸುವುದಕ್ಕಾಗಿ ಸಸಿಗಳನ್ನು ವಿತರಣೆ ನಡೆಯಲಿದೆ. ತೀರಾ ಕಡಿಮೆ ರಿಯಾಯಿತಿ ದರವಿದ್ದು, ಕೇವಲ ಮೂರು ಹಾಗೂ ರೂಪಾಯಿ ಹಾಗೂ ಆರು ರೂಪಾಯಿಗೊಂದರಂತೆ ರೈತರು ಸಸಿಗಳನ್ನು ಖರೀದಿಸಿ ನೆಡಬಹುದು. ಇನ್ನು ಗ್ರಾಮೀಣ ಭಾಗಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಬದಿ ಸಹ ನೆಡಲು ಈಗಾಗಲೇ ಸಾಮಾಜಿಕ ಅರಣ್ಯ ವಲಯದಿಂದ ಯೋಜನೆ ರೂಪಿಸಲಾಗಿದೆ. ಇದಲ್ಲದೇ ಸಾರ್ವಜನಿಕ ಉದ್ಯಾನವನ, ಸರಕಾರಿ ಕಚೇರಿ, ಬಡಾವಣೆಗಳಲ್ಲೂ ಸಹ ಈ ಸಸಿಗಳು ನೆಡಲ್ಪಡಲಿವೆ. ಹಸಿರೀಕರಣದ ಉದ್ದೇಶಕ್ಕಾಗಿ ಒಟ್ಟು 26,560 ಸಸಿಗಳು ನೆಡಲ್ಪಡಲಿದ್ದು, 13000 ಸಸಿಗಳು ರೈತರಿಗೆ ವಿತರಿಸಲ್ಪಟ್ಟು ನೆಡಲ್ಪಟ್ಟರೆ, ಉಳಿದ ಸಸಿಗಳನ್ನು ಸಾಮಾಜಿಕ ಅರಣ್ಯ ಇಲಾಖೆಯೇ ನೆಡಲಿದೆ.
ಇಷ್ಟು ದಿನ ಮಳೆ ಕೊರತೆಯಿಂದ ಸಸಿಗಳನ್ನು ನೆಡುವ ಕಾರ್ಯ ಮುಂದೂಡಲ್ಪಟ್ಟಿತ್ತು. ಈಗಾಗಲೇ ಮಳೆಯು ಆರಂಭ ಆಗಿರುವುದರಿಂದ ಸಸಿಗಳನ್ನು ನೆಡಲು ಸೂಕ್ತ ಕಾಲವು ಹೌದು. ಈ ಯೋಜನೆಯ ಉದ್ದೇಶದ ಈಡೇರಿಕೆಗಾಗಿ ಪ್ಲಾನ್ ತಯಾರಾಗಿರುವುದು ಪರಿಸರಕ್ಕಾಗಿ ಮಾದರಿ ನಡೆಯೇ ಸರಿ.
PublicNext
21/07/2026 03:58 pm