ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿರುವ ಶಿಕ್ಷಿತ ಕೈದಿ ಮಸ್ತಾನಪ್ಪ ಅಲಿಯಾಸ್ ಮಾಶಾ ಕುರಿತು ಮಾಹಿತಿ ನೀಡುವವರಿಗೆ 15 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಬೀದರ್ ಜಿಲ್ಲಾ ಪೊಲೀಸ್ ಇಲಾಖೆ ಘೋಷಿಸಿದೆ. ಬಸವಕಲ್ಯಾಣ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ನಿವಾಸಿಯಾಗಿರುವ ಮಸ್ತಾನಪ್ಪ ಅಲಿಯಾಸ್ ಮಾಶಾ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಈತನ ಬಗ್ಗೆ ಮಾಹಿತಿ ಇರುವವರು 9480803400, 9480803438 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಜುಲೈ 14ರ ನಸುಕಿನ ಜಾವ ಕಲಬುರಗಿ ಕೇಂದ್ರ ಕಾರಾಗೃಹದಿಂದ ಶಿಕ್ಷಿತ ಕೈದಿಗಳಾದ ಸಾಗರ್, ಸಂತೋಷ್ ಹಾಗೂ ಮಸ್ತಾನಪ್ಪ ಪರಾರಿಯಾಗಿದ್ದರು. ಬಳಿಕ ಸಂತೋಷ್‌ನನ್ನು ಹುಮನಾಬಾದ್ ಸಮೀಪ ಹಾಗೂ ಸಾಗರ್‌ನನ್ನು ಭಾಲ್ಕಿ ಬಸ್ ನಿಲ್ದಾಣದ ಬಳಿ ಬಂಧಿಸಲಾಗಿತ್ತು. ಆದರೆ ಮಸ್ತಾನಪ್ಪ ಇನ್ನೂ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನ ಬಗ್ಗೆ ಮಾಹಿತಿ ನೀಡುವವರಿಗೆ 15 ಸಾವಿರ ಬಹುಮಾನ ಘೋಷಿಸಲಾಗಿದೆ.
PublicNext
23/07/2026 11:30 am
LOADING...