ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಆಲಮಟ್ಟಿ ಲಾಲ್ ಬಹದ್ದೂರ್ ಜಲಾಶಯ ಭರ್ತಿ, ರೈತರಿಗೆ ನೀರಿನ ಭರವಸೆ ಮತ್ತಷ್ಟು ಗಟ್ಟಿ

ವಿಜಯಪುರ: ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಕೊರತೆಯಿಂದ ಬರದ ಛಾಯೆ ಕಾಡುತ್ತಿರುವ ನಡುವೆಯೇ ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಲಾಲ್ ಬಹದ್ದೂರ್ ಜಲಾಶಯ ಭರ್ತಿಯಾಗುತ್ತಿದ್ದು, ಉತ್ತರ ಕರ್ನಾಟಕದ ರೈತರು ಹಾಗೂ ಜನರಲ್ಲಿ ನೀರಿನ ಭರವಸೆ ಮತ್ತಷ್ಟು ಗಟ್ಟಿಯಾಗಿಸಿದೆ.

ಹೌದು..! ವಿಜಯಪುರ ಜಿಲ್ಲೆಯಲ್ಲಿ ಒಂದೆಡೆ ಬರದ ಛಾಯೆ ಆವರಿಸಿದ್ದರೆ, ಇನ್ನೊಂದೆಡೆ ಆಲಮಟ್ಟಿ ಜಲಾಶಯ ಭರ್ತಿ ಆಗುತ್ತಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಅಧಿಕ ಮಳೆಯಾಗಿದ್ದು, ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಅಧಿಕ ಪ್ರಮಾಣದ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿದೆ.

ಇನ್ನೂ ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಇದ್ದ ಅನ್ನದಾತ ಸಂಪೂರ್ಣ ಕೈ ಕಟ್ಟಿ ಕುಳಿತು ಕೊಳ್ಳುವಂತಾಗಿದೆ. ಜಮೀನಿನಲ್ಲಿ ಬಿತ್ತಿದ ಬೀಜ ಮಳೆಯಾಗದ ಕಾರಣ ಮೊಳಕೆ ಒಡೆದಿಲ್ಲ. ಹೀಗಾಗಿ ಅನ್ನದಾತ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ವಿಜಯಪುರ‌ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಶೇಕಡಾ 20% ರಷ್ಟು ಮಳೆ ಕೊರತೆಯಾಗಿದ್ದರೆ, ಜುಲೈ ತಿಂಗಳಲ್ಲಿಯೂ ಈವರೆಗೆ ಶೇಕಡಾ 15% ರಷ್ಟು ಮಳೆ ಕೊರತೆ ದಾಖಲಾಗಿದೆ. ಜಿಲ್ಲೆಯ ಒಟ್ಟು 7.5 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶ ಪೈಕಿ 5 ಲಕ್ಷದ 32 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಅಂದರೆ ಕೇವಲ 67% ಬಿತ್ತನೆಯಾಗಿದೆ. ಜಿಲ್ಲೆಯಾದ್ಯಂತ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆದಿಲ್ಲ. ಸಾವಿರಾರು ರೂಪಾಯಿ ಸಾಲ ಮಾಡಿ ತೊಗರಿ, ಈರುಳ್ಳಿ, ಕುಸುಬಿ ಹಾಗೂ ಗೋವಿನ ಜೋಳ ಬಿತ್ತನೆ ಮಾಡಿದ ರೈತರಿಗೆ ಮಳೆ ಇಲ್ಲದೇ ನಿರಾಸೆಯಾಗಿದೆ. ಬಿತ್ತಿದ ಬೀಜಗಳು ಮೊಳಕೆಯೊಡೆಯದೆ ಮಣ್ಣಿನಲ್ಲೇ ಕೊಳೆತು ಹೋಗುತ್ತಿದ್ದರೆ, ಮತ್ತೊಂದೆಡೆ ಬಿತ್ತನೆ ಮಾಡಲಾಗದೆ ಲಕ್ಷಾಂತರ ಎಕರೆ ಭೂಮಿ ಖಾಲಿ ಬಿದ್ದಿದೆ.

ಸದ್ಯ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿದ ಅಧಿಕ ಮಳೆಯ ಪರಿಣಾಮ ಅಪಾರ ಪ್ರಮಾಣದ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದು ಬಂದಿದೆ. ಕಳೆದ 20 ದಿನಗಳ ಹಿಂದಷ್ಟೇ ಬರಿದಾಗಿದ್ದ ಜಲಾಶಯ ಈಗ ಭರ್ತಿ ಹಂತಕ್ಕೆ ತಲುಪಿದ್ದು ರೈತರ ಮೊಗದಲ್ಲಿ ಸಂತಸ ತರಿಸಿದೆ. ಇನ್ನೊಂದೆಡೆ ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಬಿತ್ತಿದ ಬೆಳೆಗಳು ಹಾಳಾಗುತ್ತಿದ್ದು ಆಲಮಟ್ಟಿ ಜಲಾಶಯದಿಂದ ಕ್ಯಾನಲ್ ಮೂಲಕ ನೀರು ಹರಿಸುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ...

ಬರದಿಂದ ಕಂಗೆಟ್ಟ ರೈತ ಕಣ್ಣೀರಿಡುವಂತಾಗಿದೆ. ಆಲಮಟ್ಟಿ ಜಲಾಶಯದಿಂದ ಕ್ಯಾನಲ್ ಮೂಲಕ ನೀರು ಹರಿಸುವಂತೆ ಒತ್ತಾಯ ಹೆಚ್ಚಾಗುತ್ತಿದೆ. ವಿಜಯಪುರ ಜಿಲ್ಲೆಯ ಅನ್ನದಾತನಿಗೆ ಈಗ ಸರ್ಕಾರದ ತುರ್ತು ನೆರವಿನ ಅಗತ್ಯವಿದ್ದು, ಬರ ಘೋಷಣೆ ಹಾಗೂ ರೈತರ ಸಾಲ ಮನ್ನಾ ಬೇಡಿಕೆಗೆ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪಬ್ಲಿಕ್ ನೆಕ್ಸ್ಟ್, ವಿಜಯಪುರ

Edited By : Somashekar
PublicNext

PublicNext

24/07/2026 05:31 pm

Cinque Terre

8.69 K

Cinque Terre

0

ಸಂಬಂಧಿತ ಸುದ್ದಿ