ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಸಿದ್ಧ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್, ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯ ಸಿಬ್ಬಂದಿ ಮತ್ತು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಆಸ್ಪತ್ರೆಯಿಂದ ತಮ್ಮನ್ನು ಹೊರಹೋಗಲು ಬಿಡುತ್ತಿಲ್ಲ ಎಂದು ಆರೋಪಿಸಿದ ವಾಂಗ್ಚುಕ್, "ನನ್ನನ್ನು ಬಂಧಿಸುವುದಿದ್ದರೆ ತಕ್ಷಣ ಬಂಧಿಸಿ, ಇಲ್ಲವೇ ಹೊರಗೆ ಹೋಗಲು ಬಿಡಿ. ಅನಗತ್ಯವಾಗಿ ನನ್ನನ್ನು ಇಲ್ಲಿ ತಡೆದು ಕಿರುಕುಳ ನೀಡಲಾಗುತ್ತಿದೆ" ಎಂದು ಆಸ್ಪತ್ರೆ ಆಡಳಿತ ಹಾಗೂ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವೈರಲ್ ವೀಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ತುಣುಕಿನಲ್ಲಿ, ಸಫ್ದರ್‌ಜಂಗ್ ಆಸ್ಪತ್ರೆಯ ವಾರ್ಡ್ ಒಂದರಲ್ಲಿ ವಾಂಗ್ಚುಕ್ ಅವರು ವೈದ್ಯಕೀಯ ಸಿಬ್ಬಂದಿ ಮತ್ತು ಗೇಟ್ ಬಳಿ ನಿಂತಿದ್ದ ಪೊಲೀಸರೊಂದಿಗೆ ಬಿಸಿಬಿಸಿ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿದೆ.
*"ನನ್ನನ್ನು ಬಂಧಿಸಲು ಅವರಿಗೆ ಹೇಳಿ. ನನ್ನನ್ನು ಏಕ ಇಲ್ಲೇ ತಡೆದು ಹಿಂಸಿಸುತ್ತಿದ್ದೀರಿ? ಮಾನಸಿಕ ಒತ್ತಡದಿಂದ ನನಗೇನಾದರೂ ಸಂಭವಿಸಿದರೆ ಅದಕ್ಕೆ ನೀವೇ ಹೊಣೆ. ದಯವಿಟ್ಟು ಬಾಗಿಲು ತೆಗೆಯಿರಿ, ನಾನು ಹೋಗುತ್ತಿದ್ದೇನೆ. ಬೇಕಿದ್ದರೆ ಬಂಧಿಸಿ, ನಾಚಿಕೆಗೇಡಿನ ಜನ!"– ವಾಂಗ್ಚುಕ್ ಆಕ್ರೋಶ
ಅಲ್ಲದೆ, "ನೀವು ವೈದ್ಯರೋ ಅಥವಾ ಕಟುಕರೋ? ನನಗೆ ಧನ್ಯವಾದಗಳೊಂದಿಗೆ ಇಲ್ಲಿಂದ ನಿರ್ಗಮಿಸುವ ಆಸೆಯಿತ್ತು. ಆದರೆ ಈ ಸಂಸ್ಥೆ ಅತ್ಯಂತ ಕೆಟ್ಟದಾಗಿದೆ, ನೀವು ನಿಮ್ಮ ಆತ್ಮವನ್ನೇ ಮಾರಿಕೊಂಡಿದ್ದೀರಿ" ಎಂದು ಆಸ್ಪತ್ರೆ ಸಿಬ್ಬಂದಿಯ ವಿರುದ್ಧವೂ ಕಟುವಾಗಿ ಮಾತನಾಡಿದ್ದಾರೆ. ಇದೇ ವೇಳೆ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಅವರು ಸಹ ಸ್ಥಳದಲ್ಲಿದ್ದ ಪೊಲೀಸರ ಉದ್ಧಟತನದ ವರ್ತನೆಯನ್ನು ಪ್ರಶ್ನಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ, ವಾಂಗ್ಚುಕ್ ಅವರಿಗೆ ತಾವು ಬಯಸಿದ ಖಾಸಗಿ ಆಸ್ಪತ್ರೆಗೆ ದಾಖಲಾಗಲು ದೆಹಲಿ ಹೈಕೋರ್ಟ್ ಜುಲೈ 21 ರಂದು ಅನುಮತಿ ನೀಡಿತು.
ನ್ಯಾಯಾಲಯದ ಆದೇಶ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ವಾಂಗ್ಚುಕ್ ಆಸ್ಪತ್ರೆಯಿಂದ ಹೊರಡಲು ಮುಂದಾದಾಗ ಈ ಜಟಾಪಟಿ ನಡೆದಿದೆ.
ಆಸ್ಪತ್ರೆ ಆಡಳಿತ ಮಂಡಳಿಯ ಸ್ಪಷ್ಟನೆ
ವೀಡಿಯೋ ವೈರಲ್ ಬೆನ್ನಲ್ಲೇ ಸಫ್ದರ್‌ಜಂಗ್ ಆಸ್ಪತ್ರೆ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಜುಲೈ 21 ರಂದು ವೀಡಿಯೋಗ್ರಫಿ ನಿಷೇಧಿತ ಪ್ರದೇಶದಲ್ಲಿ ಈ ವೀಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ತಿಳಿಸಿದೆ.
"ಹೈಕೋರ್ಟ್‌ನ ಅಧಿಕೃತ ಲಿಖಿತ ಆದೇಶ ನಮಗೆ ತಲುಪುವ ಮೊದಲೇ ಮಾಧ್ಯಮಗಳ ವರದಿಗಳನ್ನು ನೋಡಿ ವಾಂಗ್ಚುಕ್ ನಿರ್ಗಮಿಸಲು ಪಟ್ಟು ಹಿಡಿದಿದ್ದರು. ನ್ಯಾಯಾಲಯದ ಲಿಖಿತ ಪ್ರತಿ ತಲುಪಿದ ತಕ್ಷಣವೇ ಸಂಜೆ 6:40 ರ ಸುಮಾರಿಗೆ ಅವರನ್ನು ಮೇದಾಂತ ಆಸ್ಪತ್ರೆಯ ವೈದ್ಯರ ತಂಡಕ್ಕೆ ಸುಗಮವಾಗಿ ಹಸ್ತಾಂತರಿಸಲಾಯಿತು" ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ.
PublicNext
25/07/2026 04:18 pm