ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಚಾಲನೆ; ಉಚಿತ ನ್ಯಾಯಸೇವೆಗೆ ಹೊಸ ಅಧ್ಯಾಯ

ವಿಜಯನಗರ: ಅಖಂಡ ಬಳ್ಳಾರಿ ಜಿಲ್ಲೆಯಲ್ಲಿಯೇ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿತ್ತು. ಈಗ ನೂತನವಾಗಿ ವಿಜಯನಗರ ಜಿಲ್ಲೆಯಲ್ಲಿ ರಚನೆಗೊಂಡು ಸಾರ್ವಜನಿಕರಿಗೆ, ಆರ್ಥಿಕವಾಗಿ ಹಿಂದುಳಿದ ಹಾಗೂ ಶೋಷಿತ ವರ್ಗಗಳಿಗೆ ಶೀಘ್ರ ಮತ್ತು ಉಚಿತ ನ್ಯಾಯ ಒದಗಿಸುವ ಐತಿಹಾಸಿಕ ಉದ್ದೇಶದೊಂದಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಂಕೀರ್ಣದಲ್ಲಿ ಅಧಿಕೃತವಾಗಿ ಕಾರ್ಯಾರಂಭವಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಜಿಲ್ಲೆಯ ಆಡಳಿತ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ವಕೀಲರ ಸಂಘದ ವತಿಯಿಂದ ನೂತನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

"ಪ್ರಜಾಪ್ರಭುತ್ವದ ನಾಲ್ಕು ಪ್ರಮುಖ ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮಗಳು ಮಹತ್ವದ ಪಾತ್ರ ವಹಿಸುತ್ತವೆ. ನ್ಯಾಯಾಂಗ ವ್ಯವಸ್ಥೆಯು ಸಫಲವಾಗಲು ಕೇವಲ ನ್ಯಾಯಾಧೀಶರು ಮಾತ್ರವಲ್ಲದೆ ವಕೀಲರು, ಪೊಲೀಸ್ ಇಲಾಖೆ, ಆಡಳಿತ ಯಂತ್ರ ಹಾಗೂ ಮುಖ್ಯವಾಗಿ ವ್ಯಾಜ್ಯದಾರರು ಒಟ್ಟಾಗಿ ಕಾರ್ಯನಿರ್ವಹಿಸಬೇಕು" ಎಂದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಹಾಗೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರತಿಯೊಬ್ಬರಿಗೂ ಸುದೀರ್ಘ ಕೋರ್ಟ್ ಹೋರಾಟ ವೆಚ್ಚದಾಯಕವಾಗಬಹುದು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಮೂಲಕ 64ಕ್ಕೂ ಹೆಚ್ಚು ಅರ್ಹ ಪ್ಯಾನಲ್ ವಕೀಲರು ಹಾಗೂ ಪ್ಯಾರಾ ಲೀಗಲ್ ಸ್ವಯಂಸೇವಕರನ್ನು ನಿಯೋಜಿಸಿ ಸಾರ್ವಜನಿಕರಿಗೆ ಅಗತ್ಯ ಕಾನೂನು ಸಲಹೆ ಮತ್ತು ಉಚಿತ ನೆರವು ನೀಡಲಾಗುತ್ತದೆ.

ಮನೆ ಬಾಗಿಲಿಗೆ ಕಾನೂನು ಸೇವೆ:

ಜನರು ಕಚೇರಿಗೆ ಬರುವುದಷ್ಟೇ ಅಲ್ಲದೆ, ಪ್ರಾಧಿಕಾರವೇ ನೇರವಾಗಿ ಜನರ ಬಾಗಿಲಿಗೆ ತೆರಳಿ ಕುಂದುಕೊರತೆಗಳನ್ನು ಆಲಿಸಲಿದೆ. ಪ್ರಕರಣಗಳು ಕೋರ್ಟ್ ಮೆಟ್ಟಿಲೇರುವ ಮುನ್ನವೇ ಪ್ರೀ-ಲಿಟಿಗೇಶನ್, ಮಧ್ಯಸ್ಥಿಕೆ ಮತ್ತು ಸಂಧಾನದ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ವೇದಿಕೆ ಕಲ್ಪಿಸಲಾಗುವುದು.

ಪೋಕ್ಸೋ ಜಾಗೃತಿ ಹಾಗೂ ಹಸಿರು ವಿಜಯನಗರ ಅಭಿಯಾನ:

ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ತಡೆಗಟ್ಟುವಿಕೆಗೆ ಯುವಜನತೆ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಶಾಲಾ-ಕಾಲೇಜು ಮತ್ತು ಗ್ರಾಮ ಮಟ್ಟದಲ್ಲಿ ಸಮಗ್ರ ಅರಿವು ಮೂಡಿಸಬೇಕಿದೆ. ಪರಿಸರ ಸಮತೋಲನ ಕಾಪಾಡಲು ರಾಜ್ಯಾದ್ಯಂತ 5 ಕೋಟಿ ಹಾಗೂ ಜಿಲ್ಲೆಯಲ್ಲಿ 5 ಲಕ್ಷ ಸಸಿಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಇದರಲ್ಲಿ ಸಾರ್ವಜನಿಕರು, ಅಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. "ಇಂದು ನಮಗಾಗಿ ಅಲ್ಲದಿದ್ದರೂ ಭವಿಷ್ಯದ ಪೀಳಿಗೆಗಾದರೂ ಸಮೃದ್ಧ ಪರಿಸರ, ಉತ್ತಮ ವಾತಾವರಣ ನಿರ್ಮಿಸಬೇಕಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ ಮತ್ತು ನ್ಯಾಯವು ಪ್ರತಿಯೊಬ್ಬರಿಗೂ ತಲುಪಬೇಕು ಎಂಬ ಆಶಯದಂತೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸಾರ್ವಜನಿಕರ ಸೇವೆಯಲ್ಲಿ ನಿರಂತರವಾಗಿ ಶ್ರಮಿಸಲಿದೆ. ಸಾರ್ವಜನಿಕರು ಇದರ ಪೂರ್ಣ ಸೌಲಭ್ಯವನ್ನು ಪಡೆದುಕೊಳ್ಳಬೇಕು" ಎಂದು ಆಶಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, "ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಕಾನೂನು ನೆರವು ಮತ್ತು ಅರಿವು ತಲುಪಿಸುವ ನಿಟ್ಟಿನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸೇವೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಈ ಪ್ರಾಧಿಕಾರದ ಸ್ಥಾಪನೆಯಿಂದ ಬಡ ಹಾಗೂ ದುರ್ಬಲ ವರ್ಗದವರಿಗೆ ಉಚಿತ ಕಾನೂನು ನೆರವು ಮತ್ತು ಸಲಹೆಗಳು ಸುಲಭವಾಗಿ ಸಿಗಲಿವೆ" ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ. ರಾಜಶೇಖರ್ ಸ್ವಾಗತಿಸಿದರು. ಸಿಜೆಎಂ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎನ್. ಸುಬ್ರಮಣ್ಯ ಅವರು ವಂದಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ ಶೆಟ್ಟಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಗುಜ್ಜಲ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಸೇರಿದಂತೆ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

26/07/2026 08:33 pm

Cinque Terre

5.64 K

Cinque Terre

0

ಸಂಬಂಧಿತ ಸುದ್ದಿ