ಶುಲ್ಕ ಹೆಚ್ಚಳಕ್ಕೆ ಬ್ರೇಕ್
ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜುಗಳ 2026–27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಕಳೆದ ವರ್ಷದ ಶುಲ್ಕಕ್ಕಿಂತ ಈ ವರ್ಷ ₹550 ಹೆಚ್ಚುವರಿ ಪ್ರವೇಶ ಶುಲ್ಕ ಪಾವತಿಸಿದ್ದಾರೆ. ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಸೇರಿ ಹಿಂದಿನ ವರ್ಷಕ್ಕಿಂತ ₹1,300 ಹೆಚ್ಚಳ ಮಾಡಿರುವುದು ವಿದ್ಯಾರ್ಥಿ ವಿರೋಧಿ ಕ್ರಮವಾಗಿದ್ದು, ಇದರಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಐಡಿಎಸ್ಓ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಆರೋಪಿಸಿದರು.
ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದ ಎಐಡಿಎಸ್ಓ ಸಂಘಟನೆ, "2024–25ನೇ ಸಾಲಿನಲ್ಲಿ ವಿದ್ಯಾರ್ಥಿಗಳು ₹3,490 ಶುಲ್ಕ ಪಾವತಿಸಿದ್ದರು. 2025–26ನೇ ಸಾಲಿನಲ್ಲಿ ಅದು ₹3,739 ಆಗಿತ್ತು. ಆದರೆ 2026–27ನೇ ಸಾಲಿನಲ್ಲಿ ವಿಶ್ವವಿದ್ಯಾಲಯ ಅಭಿವೃದ್ಧಿ ಶುಲ್ಕ ₹100 ಸೇರಿದಂತೆ ಒಟ್ಟು ₹5,039 ಶುಲ್ಕ ವಿಧಿಸಲಾಗಿದೆ. ಅಂದರೆ ಈ ವರ್ಷವೇ ₹1,300 ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಬಳ್ಳಾರಿ ಸಿಟಿ ಪದವಿ ಕಾಲೇಜಿನಲ್ಲಿ ಒಟ್ಟು ಶುಲ್ಕ ₹6,439ಕ್ಕೆ ಏರಿಕೆಯಾಗಿದೆ" ಎಂದು ಆರೋಪಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿ ರಾಜಶೇಖರ್, "ನಮ್ಮ ಮನೆಯಲ್ಲಿ ತುಂಬಾ ಬಡತನವಿದೆ. ನಾನು ಮತ್ತು ನನ್ನ ತಂಗಿ ಇಬ್ಬರೂ ಓದುತ್ತಿದ್ದೇವೆ. ಈಗ ಶುಲ್ಕ ಹೆಚ್ಚಳವಾಗಿರುವುದರಿಂದ ಇಬ್ಬರಿಗೂ ಶುಲ್ಕ ಕಟ್ಟಲು ಸಾಧ್ಯವಿಲ್ಲ ಎಂದು ತಂದೆ-ತಾಯಿ ಹೇಳುತ್ತಿದ್ದಾರೆ. 'ಒಬ್ಬರೇ ಓದಿ' ಎಂದು ಹೇಳುವ ಪರಿಸ್ಥಿತಿ ಬಂದಿದೆ. ಕೂಡಲೇ ಶುಲ್ಕ ಹೆಚ್ಚಳವನ್ನು ಹಿಂಪಡೆಯಬೇಕು" ಎಂದು ಆಗ್ರಹಿಸಿದರು.
PublicNext
05/08/2026 06:44 pm
LOADING...