ಬಳ್ಳಾರಿ ಎಪಿಎಂಸಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಬಯಲಿಗೆ ಬಂದಿದೆ. ಸಾಲು ಸಾಲು ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ತನಿಖೆಗೆ ಆದೇಶಿಸಿದ್ದಾರೆ.
ಡಿಸಿ ಆದೇಶದ ಮೇರೆಗೆ ಬಳ್ಳಾರಿ ಉಪ ವಿಭಾಗಾಧಿಕಾರಿ ರಾಜೇಶ್ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆಗೆ ಆದೇಶ ನೀಡಲಾಗಿತ್ತು. ಇದೀಗ ತನಿಖಾ ತಂಡ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದು, ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಅಧಿಕಾರಿಗಳು ಹಾಗೂ ಎಪಿಎಂಸಿ ಆಡಳಿತ ಮಂಡಳಿಯವರು ಅಕ್ರಮವಾಗಿ ಜಮೀನು ಹಾಗೂ ಅಂಗಡಿಗಳನ್ನು ವರ್ಗಾವಣೆ ಮಾಡಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಮೀಸಲಿಟ್ಟ ಅಂಗಡಿಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿತ್ತು.
ಎಪಿಎಂಸಿ ನಿಯಮಗಳನ್ನು ಗಾಳಿಗೆ ತೂರಿ ಬೆಲೆಬಾಳುವ ಭೂಮಿಯನ್ನು ಅಗ್ಗದ ದರದಲ್ಲಿ ಮಂಜೂರು ಮಾಡಲಾಗಿದೆ ಅನ್ನೋದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಕೃಷಿ ಉತ್ಪನ್ನಗಳ ಮಾರಾಟಕ್ಕೆ ನೀಡಿದ ಅಂಗಡಿಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ಟೈಲರಿಂಗ್, ಜೀನ್ಸ್ ತಯಾರಿಕೆ, ಬಿಸ್ಕತ್ತು/ಕಿರಾಣಿ ಅಂಗಡಿ, ಕೂಲ್ ಡ್ರಿಂಕ್ಸ್ ಗೋಡೌನ್, ಆಟೋಮೊಬೈಲ್ ಬಿಡಿಭಾಗಗಳ ಮಾರಾಟದಂತಹ ಕೃಷಿಯೇತರ ಉದ್ದೇಶಗಳಿಗಾಗಿ ಇದನ್ನು ಬಳಸಲಾಗುತ್ತಿದೆ.
ಎಪಿಎಂಸಿಯಿಂದ ಮಂಜೂರಾದ ಮೂಲ ವ್ಯಕ್ತಿಗಳು ತಮ್ಮ ಬಳಿ ಜಮೀನು ಇಟ್ಟುಕೊಳ್ಳದೆ ಬಾಡಿಗೆ ಅಥವಾ ಬೇರೆಯವರಿಗೆ ನೀಡಿರುವುದು ದೃಢಪಟ್ಟಿದೆ. ಹಲವೆಡೆ ನಿವೇಶನಗಳನ್ನು ಮಂಜೂರು ಮಾಡಿದರೂ ವರ್ಷಗಟ್ಟಲೆ ಬಳಕೆಯಾಗದೆ ಹಾಗೆಯೇ ಉಳಿದಿವೆ. ಎಪಿಎಂಸಿಗೆ ಸಂಬಂಧಿಸಿದ ಪೆಟ್ರೋಲ್ ಪಂಪ್‌ನ 15,000 ಚದರ ಅಡಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ.
ಸಾವಿರಾರು ರೂಪಾಯಿ ಮೌಲ್ಯದ ನಿವೇಶನವನ್ನು ಚದರ ಅಡಿಗೆ ಕೇವಲ ₹800 ನಿಗದಿಪಡಿಸಲಾಗಿದೆ. ಮಾರ್ಗಸೂಚಿ ಬೆಲೆ (₹5,000) ಪರಿಗಣಿಸಿದರೂ ಸರ್ಕಾರಕ್ಕೆ ₹7.50 ಕೋಟಿ ನಷ್ಟವಾಗಿದೆ. ಸ್ಥಳೀಯ ಮಾರುಕಟ್ಟೆ ಬೆಲೆ (₹8,000 - ₹ 9,000) ಲೆಕ್ಕ ಹಾಕಿದರೆ ಭ್ರಷ್ಟಾಚಾರದಿಂದ ₹10ರಿಂದ 11 ಕೋಟಿ ರೂಪಾಯಿ ಭಾರಿ ನಷ್ಟವಾಗಿದೆ ಅನ್ನೋದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ತನಿಖೆ ನಂತರ ಎಪಿಎಂಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಶಿಫಾರಸು. ತನಿಖೆ ನಡೆಯುತ್ತಿರುವಾಗಲೇ ಎಪಿಎಂಸಿ ಕಾರ್ಯದರ್ಶಿ ಹೊರಡಿಸಿರುವ ಹೊಸ ಟೆಂಡರ್ ಘೋಷಣೆಯನ್ನು ಕೂಡಲೇ ನಿಲ್ಲಿಸಬೇಕು. ಬೆಂಗಳೂರು ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಆಸ್ತಿಯ ಟೆಂಡರ್ ಮತ್ತು ಪ್ರಕ್ರಿಯೆಗಳನ್ನು ರದ್ದುಪಡಿಸಿ ನಿಯಮಾನುಸಾರ ಮರು ಟೆಂಡರ್ ಕರೆಯಬೇಕು.
ಕೃಷಿಯೇತರ ಉದ್ದೇಶಗಳಿಗೆ ಮತ್ತು ಅಕ್ರಮವಾಗಿ ಬಳಸುತ್ತಿರುವ ನಿವೇಶನ/ಅಂಗಡಿಗಳ ಹಂಚಿಕೆಯನ್ನು ರದ್ದುಪಡಿಸಿ ಸರ್ಕಾರಕ್ಕೆ ಹಿಂತಿರುಗಿಸಬೇಕು. ಸರಕಾರಕ್ಕೆ ಆಗಿರುವ ಆರ್ಥಿಕ ನಷ್ಟದ ಬಗ್ಗೆ ಸಮಗ್ರ ತನಿಖೆ ನಡೆಸಲು ಉನ್ನತ ಮಟ್ಟದ ವಿಶೇಷ ತಂಡ/ಸಮಿತಿ ರಚಿಸಬೇಕು. ಶಿಸ್ತು ಉಲ್ಲಂಘಿಸಿ ಅಕ್ರಮದಲ್ಲಿ ತೊಡಗಿರುವ ಎಪಿಎಂಸಿ ಕಾರ್ಯದರ್ಶಿ, ಸಿಬ್ಬಂದಿ ಹಾಗೂ ಸಿಬ್ಬಂದಿಯೇತರರ ವಿರುದ್ಧ ಕಾನೂನು ಶಿಸ್ತು ಕ್ರಮ ಜರುಗಿಸಬೇಕು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
PublicNext
29/07/2026 09:04 pm