ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ ಪಿಎಸ್‌ಐ ಅಮಾನತುಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ದಲಿತ ಮಿತ್ರ ಮಂಡಳಿ ಮನವಿ

ಗದಗ: ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್‌ಐ ಈರಪ್ಪ ರಿತ್ತಿ ಅವರು ಮುಗ್ಧ ರೈತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ 'ದಲಿತ ಮಿತ್ರ ಮಂಡಳಿ, ಗದಗ' ವತಿಯಿಂದ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಕನಕವಾಡ ಗ್ರಾಮದ ರೈತ ದಾದೇಗೌಡ ಪಾಟೀಲ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ದಾದೇಗೌಡ ಪಾಟೀಲ ಅವರ ಎದೆ ಮತ್ತು ತುಟಿಗೆ ಗಂಭೀರ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.

ಗಾಯಾಳು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಎಂಎಲ್‌ಸಿ (MLC) ಪ್ರಕರಣವೂ ದಾಖಲಾಗಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಈರಪ್ಪ ರಿತ್ತಿ ಅವರು ಈ ಹಿಂದೆಯೂ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೇಲೆ ದೈಹಿಕ ಹಲ್ಲೆ ನಡೆಸಿರುವ ಘಟನೆಗಳು ನಡೆದಿವೆ ಎಂದು ಆರೋಪಿಸಲಾಗಿದೆ.

ನವರಾತ್ರಿ ಸಂದರ್ಭದಲ್ಲಿ ದುರ್ಗಾದೇವಿ ವಿಸರ್ಜನೆ ಬಳಿಕ ಮರಳುತ್ತಿದ್ದ ಗೋಸಾವಿ ಸಮುದಾಯದ ಜನರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಹಾಗೂ ರೈತ ಸೋಮಪ್ಪ ಲಮಾಣಿ ಮೇಲಿನ ಹಲ್ಲೆಯನ್ನೂ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಆದ್ದರಿಂದ ಪಿಎಸ್‌ಐ ಈರಪ್ಪ ರಿತ್ತಿ ಅವರನ್ನು ಕೂಡಲೇ ಅಮಾನತುಗೊಳಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ದಲಿತ ಮಿತ್ರ ಮಂಡಳಿ ಆಗ್ರಹಿಸಿದೆ. ಇನ್ನು ಹತ್ತು ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಧರಣಿ, ಅಹೋರಾತ್ರಿ ಸತ್ಯಾಗ್ರಹ, ಸರದಿ ಸತ್ಯಾಗ್ರಹ ಹಾಗೂ ಆಮರಣಾಂತಿಕ ಉಪವಾಸ ಸತ್ಯಾಗ್ರಹ ಸೇರಿದಂತೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ದಲಿತ ಮಿತ್ರ ಮಂಡಳಿ ಅಧ್ಯಕ್ಷ ಕುಮಾರ ನಡಗೇರಿ, ಗೌರವಾಧ್ಯಕ್ಷ ಪಿ.ಎಸ್. ಕಾಳೆ, ಹಿರಿಯ ಮುಖಂಡ ಹುಲಿಗೆಪ್ಪ ವಾಲ್ಮೀಕಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

27/07/2026 04:06 pm

Cinque Terre

7.36 K

Cinque Terre

0

ಸಂಬಂಧಿತ ಸುದ್ದಿ