ಗದಗ: ಜಿಲ್ಲೆಯ ಮುಂಡರಗಿ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಕೃಷಿಯು ವಾಣಿಜ್ಯ ಬೆಳೆಯಾಗಿ ಯಶಸ್ವಿಯಾಗಿ ವಿಸ್ತರಣೆಯಾಗುತ್ತಿದೆ. ಮುಂಡರಗಿ ಹೋಬಳಿಯಲ್ಲಿ 124 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಗಿಡಗಳು ನಾಟಿಯಾಗಿರುವುದೇ ಇದಕ್ಕೆ ಸಾಕ್ಷಿ.
ಮುಂಡರಗಿ ತಾಲೂಕಿನಲ್ಲಿ ಮಳೆ ಬಹಳ ಕಡಿಮೆ. ಆದರೆ 3.17 ಟಿಎಂಸಿ ಸಾಮರ್ಥ್ಯದ ಹಮ್ಮಿಗಿ ಬ್ಯಾರೇಜಿಗೆ ಹೊಂದಿಕೊಂಡೇ ಇರುವ ಶಿಂಗಟಾಲೂರು, ಹಮ್ಮಿಗಿ ಸೇರಿದಂತೆ ಇತರ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಹೀಗಾಗಿ ಅಡಿಕೆ ಬೆಳೆಯಲು ಬೇಕಾದ ವಾತಾವರಣ ಸ್ವಾಭಾವಿಕವಾಗಿಯೇ ದೊರೆತಿದೆ. ಅಡಿಕೆ ಬೆಳೆ ನಿರ್ವಹಣೆಗಾಗಿ ಮುಂಡರಗಿಯಂತಹ ಬಯಲುಸೀಮೆ ಪ್ರದೇಶದಲ್ಲಿ ರೈತರು ಹನಿ ನೀರಾವರಿ ಪದ್ಧತಿಗೂ ಮೊರೆ ಹೋಗಿದ್ದಾರೆ. ಮಣ್ಣಿನಲ್ಲಿ ತೇವಾಂಶ ಕಾಪಾಡಿಕೊಳ್ಳಲು ಹಾಗೂ ಉತ್ತಮ ಇಳುವರಿ ಪಡೆಯಲು ಸೂಕ್ತ ಪೋಷಕಾಂಶಗಳ ನಿರ್ವಹಣೆ ಅಗತ್ಯವಾಗಿದ್ದು, ಇಲ್ಲಿನ ಕೆಂಪು ಮಣ್ಣಿನ ಮಸಾರಿ ಭೂಮಿ ಅದಕ್ಕೆ ಬಲ ನೀಡಿದೆ.
ಮಲೆನಾಡಿನಲ್ಲಿ ಅಡಿಕೆ ಬೆಳೆಗೆ ಕಾಣಿಸಿಕೊಳ್ಳುವ ಕೆಲವು ರೋಗಗಳಾದ ಹಿಡಿಮುಂಡಿಗೆ ರೋಗ, ಬೇರು ಕೊಳೆತ ಮತ್ತು ಹಳದಿ ರೋಗದಂತಹ ಸಮಸ್ಯೆಗಳ ನಿರ್ವಹಣೆಯನ್ನು ಇಲ್ಲಿನ ರೈತರು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಈಗಾಗಲೇ ಐದಾರು ವರ್ಷಗಳ ಹಿಂದೆಯೇ ನಾಟಿ ಮಾಡಿರುವ ಅಡಿಕೆ ಸಸಿಗಳಲ್ಲಿ ಅಡಿಕೆ ಸಮೃದ್ಧವಾಗಿ ಬೆಳೆದಿದ್ದು, ಎಕರೆಯೊಂದಕ್ಕೆ ಮೂರು ಲಕ್ಷ ರೂಪಾಯಿವರೆಗೆ ಲಾಭದ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಬಯಲುಸೀಮೆ ಪ್ರದೇಶದ ರೈತರು ಅಡಿಕೆ ಕೃಷಿ ಮೂಲಕ ಲಕ್ಷ ಲಕ್ಷ ಲಾಭದ ನಿರೀಕ್ಷೆಯಲ್ಲಿರುವುದು ಸಣ್ಣ ಮಾತಲ್ಲ. ಬರದ ಕುರಿತು ಚರ್ಚೆ ನಡೆಯುವ ಈ ದಿನಗಳಲ್ಲಿ ಇದು ಖಂಡಿತವಾಗಿಯೂ ಭರವಸೆ ಮೂಡಿಸುವ ಸಂಗತಿಯಾಗಿದೆ.
PublicNext
30/07/2026 01:09 pm
LOADING...