ಗದಗ : ಲಕ್ಷ್ಮೇಶ್ವರ ನಗರದ ಚರಂಡಿ ನೀರು ಲಂಡಿಹಳ್ಳದ ಮೂಲಕ ಹರಿದು ಅಡರಕಟ್ಟಿ ಹಾಗೂ ಮಂಜಲಾಪುರ ಗ್ರಾಮದ ರೈತರ ಜಮೀನುಗಳಿಗೆ ನುಗ್ಗುತ್ತಿರುವ ಪರಿಣಾಮ ಸುಮಾರು 150 ಎಕರೆ ಫಲವತ್ತಾದ ಕೃಷಿ ಭೂಮಿಯಲ್ಲಿ ಉಳುಮೆ ಕಾರ್ಯಕ್ಕೆ ತೀವ್ರ ತೊಂದರೆ ಉಂಟಾಗಿದ್ದು, ಸುಮಾರು 300ಕ್ಕೂ ಹೆಚ್ಚು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಆಗ್ರಹಿಸಿ ಅಡರಕಟ್ಟಿ ಹಾಗೂ ಮಂಜಲಾಪುರ ಗ್ರಾಮದ ರೈತರು ಸಮಗ್ರ ರೈತ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಲಕ್ಷ್ಮೇಶ್ವರ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮತ್ತೊಮ್ಮೆ ಮನವಿ ಸಲ್ಲಿಸಿದರು.
ಈ ಹಿಂದೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರೈತರ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಮುಖ್ಯಾಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಹದಿನೈದು ದಿನಗಳು ಕಳೆದರೂ ಯಾವುದೇ ಸಭೆ ಕರೆಯದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ರೈತರು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮನವಿ ಸಲ್ಲಿಸಿರುವ ರೈತರು, ಇನ್ನೂ ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರೈತರ ಸಭೆ ಕರೆದು ಸೂಕ್ತ ಪರಿಹಾರ ಕೈಗೊಳ್ಳದಿದ್ದರೆ ಸಮಗ್ರ ರೈತರು ಸೇರಿ ಲಕ್ಷ್ಮೇಶ್ವರ ಮೂಲಕ ಹಾದು ಹೋಗುವ ಪಾಳಾ–ಬದಾಮಿ ರಾಜ್ಯ ಹೆದ್ದಾರಿಯನ್ನು ತಡೆದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಚರಂಡಿ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗುತ್ತಿರುವುದರಿಂದ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಮಗ್ರ ರೈತ ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.
Kshetra Samachara
03/08/2026 04:33 pm
LOADING...