ಗದಗ : ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ವರ್ಷ ಉತ್ತಮ ಆದಾಯದ ನಿರೀಕ್ಷೆಯೊಂದಿಗೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆ ಬಿತ್ತನೆ ಮಾಡಿದ್ದರು. ಆದರೆ ಮಳೆಯ ಅಭಾವ ಹಾಗೂ ತೇವಾಂಶದ ಕೊರತೆಯಿಂದ ಹೆಸರು ಬೆಳೆ ಸಂಪೂರ್ಣವಾಗಿ ಹಾನಿಗೊಳಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ವರ್ಷ ಮೆಕ್ಕೆಜೋಳಕ್ಕೆ ಸಮರ್ಪಕ ಬೆಲೆ ದೊರೆಯದೆ ನಷ್ಟ ಅನುಭವಿಸಿದ್ದ ರೈತರು, ಈ ಬಾರಿ ಮೆಕ್ಕೆಜೋಳದ ಬದಲು ಹೆಸರು ಬೆಳೆಯತ್ತ ಮುಖ ಮಾಡಿದ್ದರು. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ನಡೆಸಿದರೂ, ಆರಂಭಿಕ ಮಳೆಯ ನಂತರ ಮಳೆ ಕೈಕೊಟ್ಟ ಪರಿಣಾಮ ಭೂಮಿಯಲ್ಲಿ ತೇವಾಂಶ ಉಳಿಯದೆ ಬೆಳೆ ಬೆಳವಣಿಗೆ ಕುಂಠಿತಗೊಂಡಿತು. ಇದರ ಪರಿಣಾಮವಾಗಿ ಅನೇಕ ರೈತರು ಬೆಳೆ ಉಳಿಯುವುದಿಲ್ಲ ಎಂಬ ಕಾರಣಕ್ಕೆ ಹೊಲಗಳನ್ನು ಹರಗಬೇಕಾದ ಪರಿಸ್ಥಿತಿ ಎದುರಾಯಿತು.
ಇನ್ನೂ ಕೆಲವರು ಬೆಳೆ ಉಳಿಯಬಹುದೆಂಬ ನಿರೀಕ್ಷೆಯಲ್ಲಿ ಹಾಗೆಯೇ ಬಿಟ್ಟರೂ, ತೇವಾಂಶದ ಕೊರತೆಯಿಂದ ಕಾಳು ಸರಿಯಾಗಿ ತುಂಬದೆ ಬೆಳೆ ಒಣಗಿ ಹಾಳಾಯಿತು.
ಇದರ ಜೊತೆಗೆ ಹಲವೆಡೆ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ಈಗಾಗಲೇ ಮಳೆ ಕೊರತೆಯಿಂದ ಬಳಲುತ್ತಿದ್ದ ಬೆಳೆ ಮತ್ತಷ್ಟು ಹಾನಿಗೊಳಗಾಗಿದೆ. ಉಳಿದಿದ್ದ ಅಲ್ಪ ಪ್ರಮಾಣದ ಬೆಳೆಯನ್ನು ರೈತರು ಕೊಯ್ದು ಮಾರುಕಟ್ಟೆಗೆ ತಂದಿದ್ದರೂ ನಿರೀಕ್ಷಿತ ಇಳುವರಿ ದೊರೆಯದೇ ಭಾರೀ ನಷ್ಟ ಅನುಭವಿಸುತ್ತಿದ್ದಾರೆ
.
ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಸರು ಬೆಳೆಗೆ ಪ್ರತಿ ಕ್ವಿಂಟಲ್‌ಗೆ ₹10,500 ರಿಂದ ₹11,000 ರವರೆಗೆ ಉತ್ತಮ ಬೆಲೆ ಇದ್ದರೂ, ಮಾರಾಟ ಮಾಡಲು ಸಾಕಷ್ಟು ಉತ್ಪಾದನೆಯೇ ಇಲ್ಲದಿರುವುದು ರೈತರ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತಮ ಬೆಲೆ ಇದ್ದರೂ ಬೆಳೆ ಕೈಗೆ ಸಿಗದ ಕಾರಣ "ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ" ಎಂಬಂತಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಮಳೆ ಆಧಾರಿತ ಕೃಷಿಯನ್ನೇ ನಂಬಿರುವ ರೈತರಿಗೆ ನಿರಂತರ ಮಳೆ ಕೊರತೆ, ತೇವಾಂಶದ ಅಭಾವ ಹಾಗೂ ರೋಗಬಾಧೆಗಳಿಂದ ಭಾರೀ ಆರ್ಥಿಕ ಹೊಡೆತ ಬಿದ್ದಿದೆ. ಹೀಗಾಗಿ ಸರ್ಕಾರ ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ, ಹೆಸರು ಬೆಳೆ ಬೆಳೆದ ರೈತರಿಗೆ ಸೂಕ್ತ ಪರಿಹಾರ ಹಾಗೂ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
PublicNext
30/07/2026 03:59 pm