ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಗಾವತಿಯಲ್ಲಿ 'ವಯೋಮಿತ್ರ' ಕಾರ್ಯಕ್ರಮ - ವೃದ್ಧರ ಆರೋಗ್ಯ ರಕ್ಷಣೆಗೆ ವಿಶಿಷ್ಟ ಹೆಜ್ಜೆ, 190 ಜನರಿಗೆ ಉಚಿತ ತಪಾಸಣೆ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಆಯುಷ್ ಅಭಿಯಾನದಡಿಯಲ್ಲಿ ವೃದ್ಧರ ಆರೋಗ್ಯ ಸುಧಾರಣೆಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸರಕಾರಿ ಆಯುರ್ವೇದ ಆಸ್ಪತ್ರೆ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ವಯೋವೃದ್ಧರು ಉಚಿತ ತಪಾಸಣೆ ಹಾಗೂ ಔಷಧಿಗಳ ಸೌಲಭ್ಯ ಪಡೆದುಕೊಂಡರು.

ಗಂಗಾವತಿಯ 28ನೇ ವಾರ್ಡ್‌ನ ಚಲವಾದಿ ಓಣಿಯಲ್ಲಿ ಇಂದು ಸರಕಾರಿ ಆಯುರ್ವೇದ ಆಸ್ಪತ್ರೆಯ ವತಿಯಿಂದ, ಆಯುಷ್ ಅಭಿಯಾನದ ಅಡಿಯಲ್ಲಿ ಜಾರಿಗೆ ತರಲಾದ ‘ವಯೋಮಿತ್ರ’ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ. ಗುರುರಾಜ್ ಉಮಾಚಗಿ ಅವರು, ವೃದ್ಧಾಪ್ಯದಲ್ಲೂ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುವುದು ಹೇಗೆ ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. "ವಯೋಮಿತ್ರ ಕಾರ್ಯಕ್ರಮದ ಮುಖ್ಯ ಉದ್ದೇಶವೇ ವೃದ್ಧರ ಆರೋಗ್ಯ ರಕ್ಷಣೆ. ಸೂಕ್ತ ಆಯುರ್ವೇದ ಔಷಧೋಪಚಾರ, ದಿನಚರಿ ಹಾಗೂ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಹಿರಿಯ ನಾಗರಿಕರು ತಮ್ಮ ವೃದ್ಧಾಪ್ಯ ಜೀವನವನ್ನು ಸುಖಕರವಾಗಿ ಮತ್ತು ಆರೋಗ್ಯಕರವಾಗಿ ಕಳೆಯಬಹುದು" ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಜ್ಞ ವೈದ್ಯರಾದ ಡಾ. ದೀಪ್ತಿ ಕುರುಬರ ಅವರು ಮಾತನಾಡಿ, "ಪ್ರಸ್ತುತ ದಿನಗಳಲ್ಲಿ ಉತ್ತಮ ಆರೋಗ್ಯ ಮತ್ತು ರೋಗಮುಕ್ತ ಜೀವನಕ್ಕೆ ಪರಿಸರದ ಸ್ವಚ್ಛತೆ ಹಾಗೂ ವೈಯಕ್ತಿಕ ನೈರ್ಮಲ್ಯತೆ ಅತ್ಯಂತ ಮೂಲಭೂತವಾದ ವಿಚಾರ" ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ 28ನೇ ವಾರ್ಡಿನ ನಗರಸಭೆಯ ಮಾಜಿ ಸದಸ್ಯರಾದ ಶ್ರೀ ಹಂಚಿನಾಳ ಹಾಗೂ ಹಾಲಿ ನಗರಸಭೆ ಸದಸ್ಯರಾದ ಶ್ರೀಮತಿ ಹುಲಿಗೆಮ್ಮ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೊತೆಗೆ ತಜ್ಞ ವೈದ್ಯರಾದ ಡಾ. ವೀಣಾ ಬಿಜ್ಜಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಉಚಿತ ಆರೋಗ್ಯ ಶಿಬಿರದಲ್ಲಿ 190ಕ್ಕೂ ಹೆಚ್ಚು ರೋಗಿಗಳಿಗೆ ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷೆಗಳನ್ನು ನಡೆಸಲಾಯಿತು. ಬಂದಂತಹ ಪ್ರತಿಯೊಬ್ಬರಿಗೂ ಉಚಿತ ಸಾಮಾನ್ಯ ತಪಾಸಣೆ ನಡೆಸಿ, ಆಯುರ್ವೇದ ಔಷಧಿಗಳನ್ನು ವಿತರಿಸಲಾಯಿತು.

ಫಾರ್ಮಸಿ ಅಧಿಕಾರಿ ಖಜಾಹುಸೈನ್ ಅವರು ಕಾರ್ಯಕ್ರಮದ ನಿರೂಪಣೆಯನ್ನು ಸೊಗಸಾಗಿ ನೆರವೇರಿಸಿದರೆ, ನರ್ಸಿಂಗ್ ಅಧಿಕಾರಿ ದುರ್ಗಪ್ಪ ಅವರು ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು. ಆಸ್ಪತ್ರೆಯ ಸಿಬ್ಬಂದಿಗಳಾದ ಸುನಿತಾ, ದಾವಾಲ್ ಸಾಬ್, ಹುಸೇನ್ ನಾಯಕ್ ಹಾಗೂ ಸ್ಥಳೀಯ ಆಶಾ ಕಾರ್ಯಕರ್ತೆಯರು ಶಿಬಿರದ ಯಶಸ್ಸಿಗೆ ಶ್ರಮಿಸಿದರು.

ಯಾವುದೇ ಅಡಚಣೆಯಾಗದಂತೆ ಸಾರ್ವಜನಿಕರನ್ನು ನಿಯಂತ್ರಿಸಲು ಮರೇಗೌಡ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಒದಗಿಸಿದ್ದರು. ಸ್ಥಳೀಯ ವೃದ್ಧರು ಹಾಗೂ ಸಾರ್ವಜನಿಕರು ಸರಕಾರಿ ಆಯುರ್ವೇದ ಆಸ್ಪತ್ರೆಯ ಈ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Vijay Kumar
PublicNext

PublicNext

31/07/2026 01:02 pm

Cinque Terre

5.74 K

Cinque Terre

0

ಸಂಬಂಧಿತ ಸುದ್ದಿ