ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ತಹಶೀಲ್ದಾರ್ ಡಾ. ಪ್ರತಿಭಾ ಆರ್. ರವರಿಂದ ಖಾಸಗಿ ಕಂಪ್ಯೂಟರ್ ಹಾಗೂ ಸೈಬರ್ ಸೆಂಟರ್ ಮಾಲೀಕರಿಗೆ ಕಠಿಣ ಎಚ್ಚರಿಕೆ

ಸಾಗರ: ತಾಲೂಕಿನಲ್ಲಿ ಸಾರ್ವಜನಿಕರಿಂದ ಸೈಬರ್ ಸೆಂಟರ್ ಹಾಗೂ ಖಾಸಗಿ ಕಂಪ್ಯೂಟರ್ ಕೇಂದ್ರಗಳ ವಿರುದ್ಧ ಕೇಳಿಬರುತ್ತಿರುವ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ, ಸಾಗರ ತಹಶೀಲ್ದಾರ್ ಹಾಗೂ ದಂಡಾಧಿಕಾರಿ ಡಾ. ಪ್ರತಿಭಾ ಆರ್. ಅವರು ಸಂಬಂಧಪಟ್ಟ ಮಾಲೀಕರಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ನಿವಾಸಿ ದೃಢೀಕರಣ ಪತ್ರ ಅಥವಾ ವಿವಿಧ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲು ಸೈಬರ್ ಕೇಂದ್ರಗಳಿಗೆ ತೆರಳಿದಾಗ, ನಿಗದಿತ ಶುಲ್ಕಕ್ಕಿಂತ ಅಧಿಕ ಹಣವನ್ನು ವಸೂಲಿ ಮಾಡುತ್ತಿರುವ ಬಗ್ಗೆ ಸತತವಾಗಿ ದೂರುಗಳು ಕೇಳಿಬರುತ್ತಿದ್ದು, ಇದಕ್ಕೆ ಆಡಳಿತವು ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

ಈ ಕುರಿತು ಈಗಾಗಲೇ ಕೆಲವೊಂದು ಸೈಬರ್ ಕೇಂದ್ರಗಳ ಕಾರ್ಯವೈಖರಿಯ ಬಗ್ಗೆ ತನಿಖೆ ನಡೆಸಲಾಗಿದ್ದು, ಕೆಲವು ಕಡೆಗಳಲ್ಲಿ ಅಧಿಕ ಹಣ ಪಡೆಯುತ್ತಿರುವುದು ದೃಢಪಟ್ಟಿದೆ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಸರಕಾರದಿಂದ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಾವತಿಸಬೇಕೇ ಹೊರತು, ಮಧ್ಯವರ್ತಿಗಳ ಅಥವಾ ಸೈಬರ್ ಸೆಂಟರ್ ಮಾಲೀಕರ ಅನಧಿಕೃತ ಹೆಚ್ಚಿನ ಬೇಡಿಕೆಗಳಿಗೆ ಮಣಿಯಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಯಾರಾದರೂ ನಿಮಗಿಂತ ಹೆಚ್ಚು ಹಣಕ್ಕೆ ಬೇಡಿಕೆಯಿಟ್ಟರೆ, ಕೂಡಲೇ ತಾಲೂಕು ಆಡಳಿತದ ಗಮನಕ್ಕೆ ತರಬೇಕು ಎಂದು ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಖಾಸಗಿ ಕೇಂದ್ರಗಳು ಮತ್ತು ಸೈಬರ್ ಮಾಲೀಕರು ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಪ್ರತಿಭಾ ಆರ್. ಎಚ್ಚರಿಸಿದ್ದಾರೆ. ಅತಿಯಾದ ಹಣ ಪಡೆದಿರುವುದು ಸಾಬೀತಾದರೆ ಅಂತಹ ಕೇಂದ್ರಗಳ ಮಾನ್ಯತೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದರ ಜೊತೆಗೆ ಅವುಗಳನ್ನು ಬ್ಲ್ಯಾಕ್‌ಲಿಸ್ಟ್‌ಗೆ (ಕಪ್ಪುಪಟ್ಟಿಗೆ) ಸೇರಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರ ಶೋಷಣೆಗೆ ಅವಕಾಶ ನೀಡದಂತೆ ಆಡಳಿತ ಮಂಡಳಿಯು ನಿರಂತರ ಕಣ್ಗಾವಲು ಇರಿಸಿದೆ.

ಇದೇ ವೇಳೆ, ಕೆಲವು ಸೈಬರ್ ಕೇಂದ್ರಗಳಲ್ಲಿ ಹಾಗೂ ಕಚೇರಿಗಳ ಸುತ್ತಮುತ್ತ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳಿಗೆ ಕೂಡ ಹಣ ನೀಡಬೇಕಾಗುತ್ತದೆ ಎಂದು ಮಧ್ಯವರ್ತಿಗಳು ಸಾರ್ವಜನಿಕರನ್ನು ತಪ್ಪು ದಾರಿಗೆಳೆಯುತ್ತಿದ್ದು, ಇದಕ್ಕೆ ಯಾರೂ ಕೂಡ ಬಲಿಯಾಗಬಾರದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ತಾಲೂಕು ಆಡಳಿತದ ಯಾವುದೇ ಅಧಿಕಾರಿಗಳು ಸಾರ್ವಜನಿಕರಿಂದ ಅನಧಿಕೃತ ಹಣ ಪಡೆದುಕೊಳ್ಳುವುದಿಲ್ಲ. ಮಧ್ಯವರ್ತಿಗಳ ಹಾವಳಿ ಅಥವಾ ಅವರ ಮುಖಾಂತರ ಹಣ ವಸೂಲಿ ಮಾಡುವ ಪ್ರಕರಣಗಳು ಕಂಡುಬಂದಲ್ಲಿ, ಅಂತಹವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ಸಂದೇಶ ರವಣಿಸಿದ್ದಾರೆ.

ಜಮೀಲ್ ಸಾಗರ್ “ಪಬ್ಲಿಕ್ ನೆಕ್ಸ್ಟ್ ಸಾಗರ"

Edited By : PublicNext Desk
Kshetra Samachara

Kshetra Samachara

31/07/2026 03:00 pm

Cinque Terre

1.72 K

Cinque Terre

0

ಸಂಬಂಧಿತ ಸುದ್ದಿ