ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ : ಅವೈಜ್ಞಾನಿಕ ಮೀಸಲಾತಿ ಹಾಗೂ ಬೆಳೆವಿಮೆ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ

ಸಾಗರ : ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಗುರುವಾರ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಗ್ರಾಮ ಪಂಚಾಯಿತಿಗಳ ಅವೈಜ್ಞಾನಿಕ ಮೀಸಲಾತಿ ಹಂಚಿಕೆ, ಸರಿಯಾದ ಬೆಳೆವಿಮೆ ವಿತರಣೆ ಹಾಗೂ ಕೆಟ್ಟುಹೋಗಿರುವ ಮಳೆಮಾಪನ ಯಂತ್ರಗಳ ತಕ್ಷಣದ ದುರಸ್ತಿಗೆ ಆಗ್ರಹಿಸಿ ಕಾರ್ಯಕರ್ತರು ಮತ್ತು ನಾಯಕರು ಸರ್ಕಾರದ ವಿರುದ್ಧ ಧರಣಿ ನಡೆಸಿದರು. ಈ ವೇಳೆ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ, ರೈತರಿಗೆ ಹಾಗೂ ಗ್ರಾಮ ಮಟ್ಟದ ಜನಪ್ರತಿನಿಧಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಕ್ಷಣವೇ ಸರಿಪಡಿಸಬೇಕೆಂದು ಒತ್ತಾಯಿಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಕಾಂಗ್ರೆಸ್ ಸರ್ಕಾರದ ಪ್ರಭಾವದಿಂದ ಗ್ರಾಮ ಪಂಚಾಯಿತಿ ಮೀಸಲಾತಿಯನ್ನು ಕೆಲವರ ಹಿತಾಸಕ್ತಿಗೆ ಅನುಗುಣವಾಗಿ ಸಿದ್ಧಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಸ್ಪರ್ಧೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಬೆಳೆವಿಮೆ ಪರಿಹಾರದ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದ ಅವರು, “ಸಂತೆಯಲ್ಲಿ ಒಂದು ಅಡಿಕೆ ಸಸಿಗೆ 70 ರೂ. ಬೆಲೆ ಇದೆ. ಆದರೆ ಗಾಳಿಮಳೆಯಿಂದ ದೊಡ್ಡ ಅಡಿಕೆ ಮರ ಬಿದ್ದರೆ ನೀಡುತ್ತಿರುವ ಪರಿಹಾರ ಕೇವಲ 17 ರೂ.” ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೀಸಲಾತಿ ಸರಿಪಡಿಸದಿದ್ದಲ್ಲಿ ಸತ್ಯಾಗ್ರಹದ ಜೊತೆಗೆ ಕಾನೂನು ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಕ್ಷೇತ್ರದಲ್ಲಿ ನೆರೆ ಪರಿಸ್ಥಿತಿ ಉಂಟಾದಾಗ ಶಾಸಕರು ಸಚಿವ ಸ್ಥಾನಕ್ಕಾಗಿ ಬೆಂಗಳೂರಿನಲ್ಲಿ ತಂಗಿರುವುದು ದುರಾದೃಷ್ಟಕರ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ, ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರತ್ನಾಕರ ಹೊನಗೋಡು, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಧುರಾ ಶಿವಾನಂದ್ ಹಾಗೂ ದಿಶಾ ಸಮಿತಿ ಸದಸ್ಯೆ ಸುವರ್ಣ ಟೀಕಪ್ಪ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಮಾತನಾಡಿದರು.

ಇವರೊಂದಿಗೆ ದೇವೇಂದ್ರಪ್ಪ ಯಲಕುಂದ್ಲಿ, ಗಣೇಶ್ ಪ್ರಸಾದ್, ಗಾಯತ್ರಿ ಮಲ್ಲೇಶಪ್ಪ, ರೂಪಾ, ಮೈತ್ರಿ ಪಾಟೀಲ್, ಪ್ರೇಮ್ ಸಿಂಗ್, ವಿ. ಮಹೇಶ್, ಅರುಣ್ ಕುಗ್ವೆ ಹಾಗೂ ರಾಯಲ್ ಸಂತೋಷ್ ಸೇರಿದಂತೆ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಬೆಂಬಲ ಸೂಚಿಸಿದರು.

Edited By : PublicNext Desk
PublicNext

PublicNext

06/08/2026 04:13 pm

Cinque Terre

4.8 K

Cinque Terre

0

ಸಂಬಂಧಿತ ಸುದ್ದಿ