ಸಾಗರ: ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ಸಿಗದೇ ಇದ್ದಾಗ, ಅದೇ ದಿನ ರಾತ್ರಿ ಸಂಘಪರಿವಾರದ ಪ್ರಮುಖ ಮುಖಂಡರ ಮೂಲಕ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು ಬಾಗಿಲು ತಟ್ಟಿದ್ದರು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಗಂಭೀರ ಆರೋಪ ಮಾಡಿದರು.
ಸಾಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಚಿವ ಮಧು ಬಂಗಾರಪ್ಪ ಹಾಗೂ ಗೋಪಾಲಕೃಷ್ಣ ಬೇಳೂರು ಅವರ ರಾಜಕೀಯ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು. “ಬಂಗಾರಪ್ಪನವರ ಮಗ ಎಂದು ಹೇಳಿಕೊಳ್ಳುವ ಮಧು ಬಂಗಾರಪ್ಪ ಮತ್ತು ಬಂಗಾರಪ್ಪನವರ ಶಿಷ್ಯ ಎಂದು ಹೇಳಿಕೊಳ್ಳುವ ಗೋಪಾಲಕೃಷ್ಣ ಬೇಳೂರು ಇಬ್ಬರೂ ಸೇರಿ ತಮ್ಮ ರಾಜಕೀಯ ಲಾಭಕ್ಕಾಗಿ ಜನರ ಮುಂದೆ ನಾಟಕವಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಇವರ ದ್ವಂದ್ವ ನೀತಿ ಮತ್ತು ಹೇಳಿಕೆಗಳನ್ನು ಕ್ಷೇತ್ರದ ಜನತೆ ಗಮನಿಸುತ್ತಿದ್ದಾರೆ ಎಂದು ಹಾಲಪ್ಪ ಹೇಳಿದರು.
ಸಾಗರ ವ್ಯಾಪ್ತಿಯಲ್ಲಿ ಈ ಹಿಂದೆ ಸಾವಿರಾರು ಬಾವಿಗಳನ್ನು ತೋಡಿಸಿ ರೈತರಿಗೆ ನೆರವಾಗಿದ್ದನ್ನು ಉಲ್ಲೇಖಿಸಿದ ಅವರು, ಅಭಿವೃದ್ಧಿ ಕೆಲಸಗಳ ಮೂಲಕ ಸಚಿವರಾಗಲು ಪ್ರಯತ್ನಿಸುವ ನಾಯಕರು ಒಂದೆಡೆ ಇದ್ದರೆ, ಅಧಿಕಾರದ ಆಸೆಗೆ ಬಿಜೆಪಿ ಮತ್ತು ಸಂಘಪರಿವಾರದ ಬಾಗಿಲು ತಟ್ಟುವ ಶಾಸಕರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಮತ್ತು ಶಾಸಕರ ವಿಫಲತೆಗಳ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ ಅವರು, ಕಾಂಗ್ರೆಸ್ ಸರ್ಕಾರದ ಭರವಸೆಗಳು ಹಾಗೂ ಕ್ಷೇತ್ರದ ಶಾಸಕರ ಹೇಳಿಕೆಗಳು ಸುಳ್ಳು ಎಂದು ಟೀಕಿಸಿದರು.
ಸಾಗರದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು, ಸ್ಥಳೀಯ ನಾಯಕರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
PublicNext
06/08/2026 04:50 pm
LOADING...