ಶಿವಮೊಗ್ಗ : ದಾವಣಗೆರೆ ಜಿಲ್ಲೆಯ ರೈತರ ನೀರಾವರಿ ಯೋಜನೆಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ನದಿಯಿಂದ 17.40 ಟಿಎಂಸಿ ನೀರನ್ನು ಲಿಫ್ಟ್ ಮಾಡುವ ಕಾಮಗಾರಿ ವಿಳಂಬವಾಗುತ್ತಿದ್ದು, ರೈತರಿಗೆ ಭಾರಿ ಅನ್ಯಾಯವಾಗುತ್ತಿದೆ. ಸರ್ಕಾರ ತಕ್ಷಣವೇ ಬಾಕಿ ಇರುವ 30 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ, ಚನ್ನಗಿರಿ ಹಾಗೂ ಮಾಯಕೊಂಡ ಭಾಗದ ಬಿಜೆಪಿ ಮುಖಂಡರು ಮುತ್ತಿನಕೊಪ್ಪ ಗ್ರಾಮದಲ್ಲಿ ಭದ್ರಾ ಮೇಲ್ದಂಡೆ ಲಿಫ್ಟ್ ಜಾಕ್ ವೆಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಜಿ ಶಾಸಕ ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ರೈತ ಮೋರ್ಚಾದ ಪ್ರಮುಖರು ಸ್ಥಳದಲ್ಲಿದ್ದು ಸರ್ಕಾರದ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 2008 ರಲ್ಲಿ ಯಡಿಯೂರಪ್ಪನವರ ಸರ್ಕಾರ ಇದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಯೋಜನೆ ರೂಪಿಸಿ 324 ಕೋಟಿ ರೂಪಾಯಿ ಮಂಜೂರು ಮಾಡಲಾಗಿತ್ತು. ಆದರೆ ಪ್ರಸ್ತುತ ಸರ್ಕಾರ ಈ ಯೋಜನೆಗೆ ಪವರ್ ಗ್ರಿಡ್ ಅಳವಡಿಸಲು ಹಾಗೂ ಅನುದಾನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ನಾಯಕ ರೇಣುಕಾಚಾರ್ಯ ಆರೋಪಿಸಿದರು.
ತುಂಗಾ ನದಿಯಿಂದ 17.40 ಟಿಎಂಸಿ ನೀರನ್ನು ಲಿಫ್ಟ್ ಮಾಡಲು 324 ಕೋಟಿ ರೂ. ಮಂಜೂರಾಗಿತ್ತು. ಆದರೆ ಪವರ್ ಗ್ರಿಡ್ ಅಳವಡಿಸದೇ ಇರುವುದರಿಂದ ನೀರು ಲಿಫ್ಟ್ ಆಗದೆ ಪೋಲಾಗುತ್ತಿದೆ. ತಕ್ಷಣವೇ ಇನ್ನು ಬಾಕಿ ಇರುವ 30 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು. ಸರ್ಕಾರಕ್ಕೆ ರೈತರ ಹಿತ ಮುಖ್ಯವಾಗಿಲ್ಲ, ಕೇವಲ ರಾಜಕಾರಣ ಮಾಡುತ್ತಾ ಕುರ್ಚಿ ಉಳಿಸಿಕೊಳ್ಳುವುದರಲ್ಲೇ ನಿರತರಾಗಿದ್ದಾರೆ.
ಈಗಾಗಲೇ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ತುಂಗಾ ನದಿಯಿಂದ ಹರಿದು ಹೋಗುವ ನೀರು ವ್ಯರ್ಥವಾಗುತ್ತಿದೆ. ಈ ನೀರನ್ನು ಲಿಫ್ಟ್ ಮಾಡಿ ಭದ್ರಾ ಮೇಲ್ದಂಡೆಗೆ ಹರಿಸಿದರೆ ರೈತರ ಮುಂಗಾರು ಮತ್ತು ಬೇಸಿಗೆ ಬೆಳೆಗೆ ಅನುಕೂಲವಾಗುತ್ತದೆ. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವ ಮುಖಂಡರು, ತಕ್ಷಣವೇ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲೆಯಾದ್ಯಂತ ಬೃಹತ್ ಮಟ್ಟದ ಹೋರಾಟ ಹಮ್ಮಿಕೊಳ್ಳುವುದಾಗಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಒಟ್ಟಿನಲ್ಲಿ, ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿಯಾಗಿರುವ ನೀರಾವರಿ ಯೋಜನೆಗೆ ಎದುರಾಗಿರುವ ತೊಡಕುಗಳನ್ನು ಸರ್ಕಾರ ಶೀಘ್ರದಲ್ಲೇ ಪರಿಹರಿಸುತ್ತದೆಯೋ ಅಥವಾ ರೈತರ ಆಕ್ರೋಶಕ್ಕೆ ಗುರಿಯಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.
ವೀರೇಶ್ ಜಿ ಹೊಸೂರ್, ಪಬ್ಲಿಕ್ ನೆಕ್ಸ್ಟ್. ಶಿವಮೊಗ್ಗ.
PublicNext
06/08/2026 02:21 pm