ರಬಕವಿ-ಬನಹಟ್ಟಿ: ತೇರದಾಳ ತಾಲೂಕಿನ ಗ್ರಾಮಗಳಾದ ತಮದಡ್ಡಿ, ಹಳಿಂಗಳಿ, ಹನಗಂಡಿ ಗ್ರಾಮಗಳಿಗೆ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ(ಸಿಇಒ) ಗಜಾನನ ಬಾಲೆ ಅವರು ಶನಿವಾರ ಭೇಟಿ ನೀಡಿ, ಗ್ರಾಮಗಳ ನೀರಿನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಹಾಗೂ ಗ್ರಾಪಂ ಕಚೇರಿಗಳ ಪ್ರಗತಿಯನ್ನು ಪರಿಶೀಲಿಸಿದರು.
ಕೃಷ್ಣಾ ತೀರದ ಮುಳುಗಡೆ ಗ್ರಾಮವಾದ ತಮದಡ್ಡಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಪಂಚಾಯತ ಕಚೇರಿ ಕಾರ್ಯವೈಖರಿಗಳನ್ನು ಹಾಗೂ ಸರಕಾರಿ ಶಾಲೆ ಬಳಿಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗ್ರಾಪಂ ಕಟ್ಟಡವನ್ನು ವೀಕ್ಷಿಸಿದರು.
ಆರ್.ಸಿ ಕೇಂದ್ರ, ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಮುಳುಗಡೆ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರದ ಬೇಡಿಕೆ ಸೇರಿ ಹಲವು ಬೇಡಿಕೆಗಳ ಮನವಿ ಸಲ್ಲಿಸಿದ ಗ್ರಾಮಸ್ಥರು, ಮುಳುಗಡೆ ಘೋಷಣೆಯಾಗಿದ್ದರು ಸಹ ಪುನರ್ ವಸತಿ ಕೇಂದ್ರ ನಿರ್ಮಾಣವಾಗುತ್ತಿಲ್ಲ. ಸದರಿ ವಿಷಯ ಕೋರ್ಟನಲ್ಲಿದೆ ಎಂಬ ನೇಪಕ್ಕೆ ನಮ್ಮನ್ನು ಯಾರೂ ಕೇಳೋರಿಲ್ಲದಂತಾಗಿದೆ. ೨೦೧೨ರಲ್ಲಿ ಪರಿಹಾರ ನೀಡಿದ್ದು, ಮತ್ತೇರಡು ಬಾರಿ ಪ್ರವಾಹ ಎದುರಿಸಿದ ನಮಗೆ ಪರಿಹಾರದ ಹಣ ಖಾಲಿಯಾಗಿ ಸಾಲ ಮಾಡುವಂತಾಗಿದೆ. ಅಲ್ಲದೇ ಬದಲಾದ ಪ್ರಸ್ತುತ ದರಕ್ಕೆ ತಕ್ಕಂತೆ ಹೆಚ್ಚುವರಿ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡರು. ನಂದೆಪ್ಪ ನಂದೆಪ್ಪನವರ, ಸುರೇಶ ಅಕ್ಕಿವಾಟ, ಬಸವರಾಜ ಯಾದವಾಡ, ಬಾಹುಬಲಿ ಶಿರಗಾರ, ಕಲ್ಲಪ್ಪ ಶಿರಹಟ್ಟಿ, ನೇಮಣ್ಣ ಜಮಖಂಡಿ, ಸುಕುಮಾರ ಪಾಟೀಲ ಸೇರಿದಂತೆ ಗ್ರಾಮಸ್ಥರು ಇದ್ದರು.
ಈ ಸಂದರ್ಭದಲ್ಲಿ ಇಒ ಬಸವರಾಜ ಐನಾಪೂರ, ಎಡಿ ಬಸವರಾಜ ಮುನ್ನೋಳ್ಳಿ, ಪಿಡಿಒ ಪ್ರಕಾಶ ಕನ್ನೊಳ್ಳಿ, ನೀರಾವರಿ ಇಲಾಖೆ, ಆರ್‌ಆಂಡ್‌ಆರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ತದನಂತರ ಹಳಿಂಗಳಿ ಗ್ರಾಮದ ಗುಡ್ಡದ ಪ್ರದೇಶದಲ್ಲಿರುವ "ಬಹುಗ್ರಾಮಗಳ ಕುಡಿಯುವ ನೀರಿನ ಘಟಕ" ಕ್ಕೆ ಭೇಟಿ ನೀಡಿ, ಘಟಕದ ಸಮಗ್ರ ಚಟುವಟಿಕೆಗಳನ್ನು ಹಾಗೂ ನಕಾಶೆಯನ್ನು ವಿಕ್ಷಿಸಿದರು. ನಕಾಶೆಯಲ್ಲಿ ಚಿಮ್ಮಡ ಗ್ರಾಮಕ್ಕೆ ನೀರು ಸರಬರಾಜು ಆಗುವುದಿಲ್ಲ ಎಂಬುದನ್ನು ಗಮನಿಸಿ, ಚಿಮ್ಮಡಕ್ಕೆ ನೀರಿನ ಅವಶ್ಯಕತೆ ಇಲ್ವಾ, ಹೇಗೆ ನಿರ್ವಹಣೆ ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿ, ಸದರಿ ಮಾಹಿತಿಯನ್ನು ಕೂಡ ಅಧಿಕಾರಿಗಳಿಂದ ಪಡೆದುಕೊಂಡರು.
ಇದಕ್ಕೂ ಮುನ್ನಾ ಹನಗಂಡಿ ಗ್ರಾಮದಲ್ಲಿರುವ ಮೋರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಸ್ಥಳೀಯ ಗ್ರಾಮಪಂಚಾಯತ ಕಚೇರಿಗೆ ಭೇಟಿ ನೀಡಿ, ಗ್ರಾಪಂ ಚಟುವಟಿಕೆಗಳನ್ನು ವಿಕ್ಷಿಸಿದರು.
Kshetra Samachara
01/08/2026 03:30 pm