ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಈ ಋತುವಿನ ಮೀನುಗಾರಿಕೆ ಇಂದಿನಿಂದ ಆರಂಭ: ತೂಫಾನ್ ಭೀತಿಗೆ ಕಡಲಿಗಿಳಿಯದ ಬೋಟ್‌ಗಳು

ಮಂಗಳೂರು: ಕಳೆದೆರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಆಳ ಸಮುದ್ರ ಮೀನುಗಾರಿಕೆಯು ಆಗಸ್ಟ್ 1ರಿಂದ ಆರಂಭಗೊಂಡಿದೆ. ಆದರೆ ಐಎಂಡಿ (IMD) ನಾಲ್ಕು ದಿನಗಳ ಕಾಲ ತೂಫಾನ್ ಎಚ್ಚರಿಕೆ ನೀಡಿದ್ದರಿಂದ ಮೀನುಗಾರಿಕೆಗೆ ಬೋಟ್‌ಗಳು ತೆರಳದೆ ಬಂದರಿನಲ್ಲೇ ಲಂಗರು ಹಾಕಿವೆ. ಮೀನುಗಾರಿಕೆಗೆಂದು ಹೋಗಿದ್ದ ನಾಲ್ಕಾರು ಬೋಟ್‌ಗಳು ಮುಂದೆ ತೆರಳಲಾಗದೆ ಮರಳಿ ದಡ ಸೇರಿವೆ.

ಜೂನ್ 1ರಿಂದ ಜುಲೈ 31ರವರೆಗಿದ್ದ ಮೀನುಗಾರಿಕಾ ರಜಾ ಅವಧಿ ಇಂದಿಗೆ ಮುಕ್ತಾಯಗೊಂಡಿದೆ. ಈ ಋತುವಿನಲ್ಲಿ ಮಂಗಳೂರು ಮೀನುಗಾರಿಕಾ ಧಕ್ಕೆಯಲ್ಲಿ ಮತ್ತೆ ಪರ್ಸೀನ್, ಟ್ರಾಲ್ ಸೇರಿದಂತೆ ಆಳ ಸಮುದ್ರ ಮೀನುಗಾರಿಕೆಯ ಯಾಂತ್ರೀಕೃತ ಬೋಟ್‌ಗಳು ಕಡಲಿಗಿಳಿಯಲು ಸಿದ್ಧತೆ ನಡೆಸಿವೆ.

ರಜಾ ಅವಧಿಯಲ್ಲಿ ಬಲೆಗಳ ದುರಸ್ತಿ, ಬೋಟ್‌ಗಳಲ್ಲಿನ ಸಣ್ಣಪುಟ್ಟ ತಾಂತ್ರಿಕ ಕಾರ್ಯಾಚರಣೆ, ಇಂಜಿನ್‌ಗಳ ತಪಾಸಣೆ, ಬೋಟ್‌ಗಳಿಗೆ ಪೇಂಟಿಂಗ್ ಮಾಡಿಸಿ ಮೀನುಗಾರಿಕೆ ನಡೆಸಲು ಸಿದ್ಧಗೊಳಿಸಲಾಗಿದೆ. ಈಗಾಗಲೇ ರಜೆಯಲ್ಲಿ ಊರಿಗೆ ಹೋಗಿದ್ದ ಹೊರರಾಜ್ಯಗಳ ಕಾರ್ಮಿಕರು ವಾಪಸಾಗಿದ್ದಾರೆ. ಅಂತಿಮ ಹಂತದ ಸಿದ್ಧತೆಯಾಗಿ ಬೋಟ್‌ಗಳಿಗೆ ಐಸ್ ಹಾಕುವುದು, ಬಲೆ, ಹಗ್ಗಗಳು ಸೇರಿದಂತೆ ಮೀನುಗಾರಿಕೆಗೆ ಅಗತ್ಯವಾದ ವಸ್ತುಗಳನ್ನು ಬೋಟ್‌ಗಳಿಗೆ ತುಂಬಿಸುವ ಕಾರ್ಯವೂ ಮುಕ್ತಾಯಗೊಂಡಿದೆ.

"ಈ ಬಾರಿ 1,655 ಬೋಟ್‌ಗಳು ಕಡಲಿಗಿಳಿಯಲಿವೆ. ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,97,381 ಟನ್ ಮೀನುಗಾರಿಕೆಯಾಗಿ, 3,850 ಕೋಟಿ ರೂ. ವ್ಯವಹಾರ ನಡೆದಿದೆ. ಇದು ಉತ್ತಮ ಮೀನುಗಾರಿಕೆ ಎಂದೇ ಹೇಳಬಹುದು. ಈ ಬಾರಿ ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆಯಲ್ಲೂ ಉತ್ತಮ ವ್ಯವಹಾರ ನಡೆದಿದೆ" ಎಂದು ಮೀನುಗಾರಿಕೆ ಜಂಟಿ ನಿರ್ದೇಶಕರಾದ ದರ್ಶನ್ ಕೆ.ಟಿ. ತಿಳಿಸಿದ್ದಾರೆ.

Edited By :
PublicNext

PublicNext

01/08/2026 04:45 pm

Cinque Terre

11.58 K

Cinque Terre

0

ಸಂಬಂಧಿತ ಸುದ್ದಿ