ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ಅನಾಮಧೇಯ ದೂರಿನ ಸಮಗ್ರ ತನಿಖೆಗೆ ಆಗ್ರಹ - ಡಾ. ಅರುಣ್ ಕುಮಾರ್ ಪರ ಸಾರ್ವಜನಿಕರ ಬೆಂಬಲ

ಭಟ್ಕಳ: ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಶಸ್ತ್ರಚಿಕಿತ್ಸಕ ಡಾ. ಅರುಣ್ ಕುಮಾರ್ ಅವರ ವಿರುದ್ಧ ಅನಾಮಧೇಯವಾಗಿ ಸಲ್ಲಿಸಲಾದ ದೂರಿನ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ದೂರಿನಲ್ಲಿರುವ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿ, ದೂರುದಾರರನ್ನು ಪತ್ತೆಹಚ್ಚಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸಾರ್ವಜನಿಕರ ಪ್ರಕಾರ, ಡಾ. ಅರುಣ್ ಕುಮಾರ್ ಹಲವು ವರ್ಷಗಳಿಂದ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, 2023–24ನೇ ಸಾಲಿನ ಅತ್ಯುತ್ತಮ ವೈದ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆಯ ನಡುವೆಯೂ ತುರ್ತು ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು, ಸರ್ಕಾರಿ ಆಸ್ಪತ್ರೆಯನ್ನು ಉತ್ತಮ ಚಿಕಿತ್ಸಾ ಕೇಂದ್ರವಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

2026–27ನೇ ಸಾಲಿನ ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ (ಎಬಿ–ಆರ್ಕೆ) ಯೋಜನೆಯ ರಾಜ್ಯಮಟ್ಟದ ಶ್ರೇಯಾಂಕದಲ್ಲಿ ಭಟ್ಕಳ ತಾಲೂಕು ಆಸ್ಪತ್ರೆ 37ನೇ ಸ್ಥಾನ ಪಡೆದಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಅನಾಮಧೇಯ ದೂರುಗಳ ಮೂಲಕ ಅಪಪ್ರಚಾರ ನಡೆಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಆರೋಪಗಳು ಸಾಬೀತಾಗದಿದ್ದರೆ ಸುಳ್ಳು ದೂರು ನೀಡಿದವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಡಾ. ಅರುಣ್ ಕುಮಾರ್ ಅವರ ವಿರುದ್ಧ ಯಾವುದೇ ಏಕಪಕ್ಷೀಯ ಆಡಳಿತಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಮಾತನಾಡಿ, "ಡಾ. ಅರುಣ್ ಕುಮಾರ್ ಅವರ ಸೇವೆಯಿಂದ ವಿವಿಧ ಭಾಗಗಳಿಂದಲೂ ರೋಗಿಗಳು ಭಟ್ಕಳ ತಾಲೂಕು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಇಂತಹ ಸೇವಾ ಮನೋಭಾವದ ವೈದ್ಯರ ವಿರುದ್ಧ ಅನಾಮಧೇಯ ದೂರು ನೀಡಿರುವುದು ಖಂಡನೀಯ," ಎಂದರು.

ಎನ್.ಡಿ. ಖಾರ್ವಿ ಮಾತನಾಡಿ, "ನನ್ನ ಪತ್ನಿಗೆ ಇದೇ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿತ್ತು. ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೆ ಆಸ್ಪತ್ರೆಯಲ್ಲೇ ಉಳಿದು ರೋಗಿಗಳ ಸೇವೆ ಸಲ್ಲಿಸುವ ವೈದ್ಯರ ವಿರುದ್ಧ ದೂರು ನೀಡಿರುವುದು ಸರಿಯಲ್ಲ. ಅಗತ್ಯವಿದ್ದರೆ ಸುಳ್ಳು ದೂರು ನೀಡಿದವರ ವಿರುದ್ಧ ನಾನೇ ದೂರು ಸಲ್ಲಿಸುತ್ತೇನೆ," ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಣ್ಣಪ್ಪ ನಾಯ್ಕ, ವಿಶ್ವನಾಥ ಮಾಹಲೆ, ಪರಮೇಶ್ವರ ನಾಯ್ಕ, ಮಂಜುನಾಥ ನಾಯ್ಕ, ಗಣೇಶ ಹಳ್ಳೆರ್, ಬಾಬು ನಾಯ್ಕ, ನಾಗೇಶ್ ನಾಯ್ಕ, ಶಂಕರ್ ನಾಯ್ಕ, ಪಾಂಡುರಂಗ ನಾಯ್ಕ, ಶ್ರೀಧರ್ ನಾಯ್ಕ, ಅಪ್ಪು ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By :
PublicNext

PublicNext

01/08/2026 05:59 pm

Cinque Terre

10.68 K

Cinque Terre

0

ಸಂಬಂಧಿತ ಸುದ್ದಿ