ಚಿಂತಾಮಣಿ: ನಗರದ ವಾರ್ಡ್ ಸಂಖ್ಯೆ ೨೬ರ ಸರ್ಕಾರಿ ಪಾರ್ಕ್ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಕುರಿ ಶೆಡ್ ನಿರ್ಮಿಸಿದ್ದ ಆರೋಪದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಶನಿವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು.
ನಗರಸಭೆ ಪೌರಾಯುಕ್ತ ಜಿ.ಎನ್. ಚಲಪತಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಮಾಜಿ ನಗರಸಭಾ ಸದಸ್ಯ ಸಲೀಮ್ ಅವರಿಂದ ನಡೆದಿದ್ದ ಎನ್ನಲಾದ ಒತ್ತುವರಿಯನ್ನು ತೆರವುಗೊಳಿಸಲಾಯಿತು.
ಈ ವೇಳೆ ಪೌರಾಯುಕ್ತ ಹಾಗೂ ಮಾಜಿ ನಗರಸಭಾ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕಾರ್ಯಾಚರಣೆಯನ್ನು ಪ್ರಶ್ನಿಸಿದ ಮಾಜಿ ಸದಸ್ಯರು, ಪೌರಾಯುಕ್ತರನ್ನು "ಕಾಂಗ್ರೆಸ್ ಏಜೆಂಟ್" ಎಂದು ಆರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೌರಾಯುಕ್ತರು ತೀವ್ರ ವಾಗ್ದಾಳಿ ನಡೆಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳದಲ್ಲಿ ನಗರಸಭೆ ಸಿಬ್ಬಂದಿ ಹಾಗೂ ಪೊಲೀಸ್ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಿ, ಪಾರ್ಕ್ ಪ್ರದೇಶದಲ್ಲಿದ್ದ ಒತ್ತುವರಿಯನ್ನು ತೆರವುಗೊಳಿಸಲಾಯಿತು.
ಘಟನೆಯು ಸಾರ್ವಜನಿಕರ ಗಮನ ಸೆಳೆದಿದ್ದು, ನಗರಸಭೆಯ ಸಾರ್ವಜನಿಕ ಆಸ್ತಿಗಳ ಮೇಲಿನ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ: ಚಿಕ್ಕತೇಕಹಳ್ಳಿ ಡಿ. ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್, ಚಿಕ್ಕಬಳ್ಳಾಪುರ
PublicNext
01/08/2026 11:00 pm
LOADING...