ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ವಿರುದ್ಧ ಗಂಭೀರ ಭೂ ಕಬಳಿಕೆ ಆರೋಪ ಕೇಳಿಬಂದಿವೆ. ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ (ಎಎಸ್‌ಎಸ್‌ಕೆ) ರಾಜ್ಯಾಧ್ಯಕ್ಷ ಸಂದೇಶ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಶಾಸಕರಾದ ನಂತರ ಸುಬ್ಬಾರೆಡ್ಡಿ ಸುಮಾರು 800 ಎಕರೆ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದರು.
ಇಂತಹ ವ್ಯಕ್ತಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬಾರದು. ಒಂದು ವೇಳೆ ಸಚಿವ ಸ್ಥಾನ ನೀಡಿದರೆ ಮುಖ್ಯಮಂತ್ರಿ ನಿವಾಸದ ಮುಂದೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ದಲಿತರು ಹಾಗೂ ಹಿಂದುಳಿದ ವರ್ಗಗಳ ಭೂಮಿಗಳನ್ನು ಕಬಳಿಸಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಶಾಸಕ ಸುಬ್ಬಾರೆಡ್ಡಿ ಸರ್ವಾಧಿಕಾರಿ ಧೋರಣೆಯಲ್ಲಿ ನಡೆದುಕೊಳ್ಳುತ್ತಿದ್ದು, ಅವರ ವಿರುದ್ಧ ಧ್ವನಿ ಎತ್ತುವ ದಲಿತರು ಅಥವಾ ಸಂಘಟನೆಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಸುಳ್ಳು ಎಫ್‌ಐಆರ್ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ದಲಿತರ ಸಮಾಧಿ ಸ್ಥಳಗಳನ್ನು ತೆರವುಗೊಳಿಸಿ ಒತ್ತುವರಿ ಮಾಡಿಕೊಂಡಿರುವ ಆರೋಪವೂ ಇದೆ ಎಂದು ಹೇಳಿದ ಸಂದೇಶ್, ಈ ರೀತಿಯ ಬೆಳವಣಿಗೆ ಮುಂದುವರಿದರೆ ಅಂಬೇಡ್ಕರ್ ಸೇವಾ ಸಮಿತಿಯ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚಿಕ್ಕತೇಕಹಳ್ಳಿ ಡಿ ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್, ಚಿಕ್ಕಬಳ್ಳಾಪುರ
PublicNext
23/07/2026 01:37 pm
LOADING...