ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ : ಬಾಗೇಪಲ್ಲಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಚಿಕ್ಕಬಳ್ಳಾಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗ್ಯನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿದರು. ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಅಮರನಾಥ್ ಮಾತನಾಡಿ, "ಮೂರು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದೆ ಪಕ್ಷ ದ್ರೋಹ ಎಸಗಿದೆ" ಎಂದು ಆರೋಪಿಸಿದರು. "ಬಿಜೆಪಿ ನೀಡಿದ ಆಮಿಷಗಳ ನಡುವೆಯೂ ಕಾಂಗ್ರೆಸ್‌ನಲ್ಲೇ ನಿಷ್ಠೆಯಿಂದ ಸೇವೆ ಸಲ್ಲಿಸಿದ ನಾಯಕರನ್ನು ಕಡೆಗಣಿಸಿರುವುದು ಬೇಸರದ ಸಂಗತಿ" ಎಂದರು.

ಡಿಎಸ್ಎಸ್ ಜಿಲ್ಲಾ ಸಂಚಾಲಕ ಬಿ.ವಿ. ವೆಂಕಟರಮಣ ಮಾತನಾಡಿ, "ಜಾತಿ-ಮತ ಭೇದವಿಲ್ಲದೆ ಜನಸೇವೆ ಮಾಡಿದ ಸುಬ್ಬಾರೆಡ್ಡಿ ಸಾವಿರಾರು ಬಡವರ ವಿವಾಹಗಳಿಗೆ ನೆರವಾಗಿ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೂ ವಿಶೇಷ ಕೊಡುಗೆ ನೀಡಿದ್ದಾರೆ. ಗಡಿಭಾಗದ ಸಮಸ್ಯೆಗಳ ಪರಿಹಾರಕ್ಕಾಗಿ ಜನತಾದರ್ಶನ ನಡೆಸಿದಂತಹ ಜನಪ್ರಿಯ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಅನ್ಯಾಯ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ. ಎ.ವಿ. ಪೂಜಪ್ಪ ಮಾತನಾಡಿ, "ಬಾಗೇಪಲ್ಲಿ ಗಡಿಭಾಗದ ಅಭಿವೃದ್ಧಿಗಾಗಿ ಈ ಬಾರಿ ಸಚಿವ ಸ್ಥಾನ ನೀಡಬೇಕಾಗಿತ್ತು. ಕ್ಷೇತ್ರದ ಜನರ ಆಶಯವನ್ನು ಸರ್ಕಾರ ನಿರ್ಲಕ್ಷಿಸಿರುವುದು ದುರದೃಷ್ಟಕರ" ಎಂದರು. ಪ್ರತಿಭಟನೆಯ ಅಂತ್ಯದಲ್ಲಿ ಕಾಂಗ್ರೆಸ್ ಮುಖಂಡರು ಬುಧವಾರ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಸಂಪೂರ್ಣ ಬಂದ್‌ಗೆ ಕರೆ ನೀಡಿದರು.

ಈ ಪ್ರತಿಭಟನೆಯಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಎ. ಶ್ರೀನಿವಾಸ್, ಜಯಪ್ರಕಾಶ್ ನಾರಾಯಣ್, ವಕೀಲ ನಂಜುಂಡ, ಗುಡಿಬಂಡೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಡಪಲ್ಲಿ ಅದಿರೆಡ್ಡಿ ಸೇರಿದಂತೆ ಹಲವು ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Edited By :
PublicNext

PublicNext

04/08/2026 06:49 pm

Cinque Terre

8.55 K

Cinque Terre

0

ಸಂಬಂಧಿತ ಸುದ್ದಿ