ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ 'ಸಂಘಟನ್ ಸೃಜನ ಅಭಿಯಾನ' ಕಾರ್ಯಕ್ರಮದಲ್ಲಿ ಏಕಾಏಕಿ ಗದ್ದಲದ ವಾತಾವರಣ ನಿರ್ಮಾಣವಾಗಿದೆ. ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಮೇಲೆ ಹಲ್ಲೆಗೆ ಯತ್ನ ನಡೆದಿರುವ ಆರೋಪ ಕೇಳಿಬಂದಿದ್ದು, ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬೆಂಬಲಿಗರು ಮತ್ತು ಪುಟ್ಟು ಆಂಜಿನಪ್ಪ ಬೆಂಬಲಿಗರ ನಡುವೆ ಮಾತಿನ ಚಕಮಕಿ ಬಳಿಕ ತಳ್ಳಾಟ-ನೂಕಾಟ ನಡೆದಿದೆ. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಹಾಗೂ ನಾಯಕರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.
ಹೌದು, ಎಐಸಿಸಿ ಕಾರ್ಯದರ್ಶಿ ಪಾಲಕ್ ವರ್ಮಾ ನೇತೃತ್ವದಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಕಾರ್ಯಕ್ರಮದ ವೇಳೆ ಶಿಡ್ಲಘಟ್ಟ ರಾಜಕೀಯ ವಿಚಾರವಾಗಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಆರಂಭವಾಗಿ, ನಂತರ ಅದು ತಳ್ಳಾಟ-ನೂಕಾಟಕ್ಕೆ ತಿರುಗಿದೆ ಎನ್ನಲಾಗಿದೆ.
ಈ ವೇಳೆ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರ ಕಡೆಗೆ ಕೆಲವರು ನುಗ್ಗಿದ್ದು, ಹಲ್ಲೆಗೆ ಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಘಟನೆಯ ಬೆನ್ನಲ್ಲೇ ಪುಟ್ಟು ಆಂಜಿನಪ್ಪ ಹಾಗೂ ರಾಜೀವ್ ಗೌಡ ಬೆಂಬಲಿಗರ ನಡುವೆ ವಾಗ್ವಾದ ಮತ್ತು ಹೊಡೆದಾಟ ನಡೆದಿದ್ದು, ಕೆಲಕಾಲ ಸಭಾಂಗಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಪರಿಸ್ಥಿತಿ ಕೈ ಮೀರದಂತೆ ಸ್ಥಳದಲ್ಲಿದ್ದ ಹಿರಿಯ ಕಾಂಗ್ರೆಸ್ ನಾಯಕರು ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಂದಾದರು. ಗದ್ದಲ ಹೆಚ್ಚಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
ಈ ಘಟನೆ ಜಿಲ್ಲೆಯ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಘಟನೆಯ ಕುರಿತು ಪಕ್ಷದ ಮುಖಂಡರ ಪ್ರತಿಕ್ರಿಯೆ ಹಾಗೂ ಮುಂದಿನ ಕ್ರಮದ ಬಗ್ಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನಡೆದ ಈ ಗದ್ದಲ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಲ್ಲೆಗೆ ಯತ್ನದ ಆರೋಪದ ಕುರಿತು ಸಂಬಂಧಪಟ್ಟವರ ಅಧಿಕೃತ ಹೇಳಿಕೆ ಹಾಗೂ ಪೊಲೀಸ್ ತನಿಖೆಯ ನಂತರವೇ ಘಟನೆಯ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ.
-ಚಿಕ್ಕತೇಕಹಳ್ಳಿ ಡಿ ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
26/07/2026 08:46 pm