ಚೇಳೂರು : ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಚೇಳೂರು ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಅಂಗವಾಗಿ ತಾಲೂಕಿನಲ್ಲಿ ಅಂಗಡಿಗಳು ಹಾಗೂ ಶಾಲೆಗಳಿಗೆ ರಜೆ ಘೋಷಿಸಿ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿತ್ತು. ಅಲ್ಲದೆ, ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಾಂಗ್ರೆಸ್ ಮುಖಂಡರು ಹಾಗೂ ಸಾರ್ವಜನಿಕರು ಮೆರವಣಿಗೆ ನಡೆಸಿದರು.
ತಾಲೂಕಿನ ವಿವಿಧ ಬೀದಿಗಳಲ್ಲಿ ನೂರಾರು ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿ, ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು. ಬಳಿಕ ಪ್ರತಿಭಟನಾಕಾರರು ರಸ್ತೆ ಬದಿಯಲ್ಲೇ ಕುಳಿತು ಸಾಮೂಹಿಕವಾಗಿ ಊಟ ಸವಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯ ವೇಳೆ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದ್ದು, ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು. ಪ್ರತಿಭಟನೆಯಿಂದ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಚಿಕ್ಕತೇಕಹಳ್ಳಿ ಡಿ. ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್, ಚಿಕ್ಕಬಳ್ಳಾಪುರ
PublicNext
05/08/2026 11:49 am
LOADING...