ಶಿವಮೊಗ್ಗ: ಬೀಗ ಹಾಕಿದ್ದ ಮನೆಯ ಸಮೀಪ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ರಾತ್ರಿ ಗಸ್ತಿನಲ್ಲಿದ್ದ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗ ತಾಲೂಕಿನ ಕೋಟೆಗಂಗೂರು ಗ್ರಾಮದಲ್ಲಿ ನಡೆದಿದೆ.
ಕೋಟೆಗಂಗೂರು ಗ್ರಾಮದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ, ಬೀಗ ಹಾಕಿದ್ದ ಮನೆಯ ಸಮೀಪ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಆತ ತನ್ನ ಮುಖವನ್ನು ಕರವಸ್ತ್ರದಿಂದ ಮುಚ್ಚಿಕೊಂಡಿದ್ದು, ಮನೆಯ ಸುತ್ತಮುತ್ತ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದನು ಎನ್ನಲಾಗಿದೆ.
ಪೊಲೀಸರು ಆತನನ್ನು ವಿಚಾರಿಸಲು ಮುಂದಾಗುತ್ತಿದ್ದಂತೆಯೇ, ಆತ ಕತ್ತಲೆಯ ಸದುಪಯೋಗ ಪಡೆದು ಸ್ಥಳದಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಹಾಗೂ ಸಿಬ್ಬಂದಿ ಬೆನ್ನಟ್ಟಿಕೊಂಡು ಆತನನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಆತ ತನ್ನನ್ನು ಸುನಿಲ್ ಕುಮಾರ್ ಎಂ @ ಸುನಿಲ್ (37), ಉಪ್ಪಾರ ಬೀದಿ, ಕೋಟೆಗಂಗೂರು ಗ್ರಾಮದ ನಿವಾಸಿ ಹಾಗೂ ಕೂಲಿ ಕಾರ್ಮಿಕ ಎಂದು ಪರಿಚಯಿಸಿಕೊಂಡಿದ್ದಾನೆ. ಆದರೆ ಆ ಸಮಯದಲ್ಲಿ ಆ ಸ್ಥಳದಲ್ಲಿರುವುದಕ್ಕೆ ಯಾವುದೇ ಸಮಂಜಸವಾದ ಕಾರಣ ಅಥವಾ ಉತ್ತರ ನೀಡಲು ವಿಫಲನಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆತನನ್ನು ಸ್ಥಳದಲ್ಲೇ ಬಿಟ್ಟರೆ ಕಳ್ಳತನ ಅಥವಾ ಇತರೆ ಅಪರಾಧ ಕೃತ್ಯ ಎಸಗುವ ಸಾಧ್ಯತೆ ಇದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆತಂದು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
PublicNext
02/08/2026 10:38 am
LOADING...