ಶಿವಮೊಗ್ಗ : ಕುಡಿದ ಅಮಲಿನಲ್ಲಿ ಕುಟುಂಬಸ್ಥರ ಮೇಲೆ ಗಲಾಟೆ ಮಾಡಿ ಹಲ್ಲೆ ನಡೆಸಲು ಮುಂದಾಗಿದ್ದ ವ್ಯಕ್ತಿಯನ್ನು ಆತನ ಮಗನೇ ಕತ್ತು ಹಿಸುಕಿ ಕೊಂದಿರುವ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಅರಶಿನಘಟ್ಟದಲ್ಲಿ ನಡೆದಿದೆ.
ಮೃತರನ್ನು ಶಿವಗ ನಾಯ್ಕ (55) ಎಂದು ಗುರುತಿಸಲಾಗಿದ್ದು, ಆರೋಪಿ ಪುತ್ರನನ್ನು ಮಂಜುನಾಥ ನಾಯ್ಕ ಎಂದು ಗುರುತಿಸಲಾಗಿದೆ. ಅರಶಿನಘಟ್ಟ ತಾಂಡಾದಲ್ಲಿ ಕುಟುಂಬ ಕಲಹವು ದಾರುಣ ತಿರುವು ಪಡೆದಿದೆ.
ಎಫ್‌ಐಆರ್‌ನಲ್ಲಿ ದಾಖಲಾಗಿರುವ ಮಾಹಿತಿಯಂತೆ, ಶಿವಗ ನಾಯ್ಕ ಅವರು ಹೊಸ ಮನೆ ನಿರ್ಮಾಣ ಹಾಗೂ ಇಬ್ಬರು ಪುತ್ರರ ವಿವಾಹಕ್ಕಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಈ ವಿಚಾರವಾಗಿ ಮನೆಯಲ್ಲಿ ಪದೇಪದೇ ಗಲಾಟೆ ನಡೆಯುತ್ತಿತ್ತು. ನಂತರ ಶಿವಗ ನಾಯ್ಕ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಸೊಸೆಯಂದಿರನ್ನು ಹೊಸ ಮನೆಯಿಂದ ಹೊರಗೆ ಕಳುಹಿಸಿದ್ದು, ಅವರು ಹಳೆಯ ಮನೆಯಲ್ಲಿ ವಾಸವಾಗಿದ್ದರು.
ಆದರೆ ಶಿವಗ ನಾಯ್ಕ ಅವರು ಮದ್ಯಪಾನ ಮಾಡಿ ಆಗಾಗ ಹಳೆಯ ಮನೆಗೆ ಬಂದು ಗಲಾಟೆ ಮಾಡುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಿವಗ ನಾಯ್ಕ ಮದ್ಯದ ಅಮಲಿನಲ್ಲಿ ಹಳೆಯ ಮನೆಗೆ ಬಂದು, "ಈ ಮನೆಯಲ್ಲಿ ಇರಬಾರದು, ಮನೆ ಬಿಟ್ಟು ಹೋಗಿ" ಎಂದು ಪತ್ನಿ ಪಾರ್ವತಿ ಬಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲು ಆರಂಭಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಅಲ್ಲೇ ಇದ್ದ ಪುತ್ರ ಮಂಜುನಾಥ ನಾಯ್ಕ, "ನನ್ನ ತಾಯಿಗೆ ಏಕೆ ಹೊಡೆಯುತ್ತಿದ್ದೀರಿ?" ಎಂದು ಪ್ರಶ್ನಿಸಿ ಮಧ್ಯಪ್ರವೇಶಿಸಿದ್ದಾನೆ. ಇದರಿಂದ ತಂದೆ-ಮಗನ ನಡುವೆ ಮಾತಿನ ಚಕಮಕಿ ತೀವ್ರಗೊಂಡು, ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಜಗಳದ ವೇಳೆ ಮಂಜುನಾಥ ನಾಯ್ಕ ತನ್ನ ತಂದೆಯ ಕುತ್ತಿಗೆಯನ್ನು ಕೈಗಳಿಂದ ಬಿಗಿಯಾಗಿ ಹಿಸುಕಿದ ಪರಿಣಾಮ ಶಿವಗ ನಾಯ್ಕ ಉಸಿರಾಟದ ತೊಂದರೆಯಿಂದ ನೆಲಕ್ಕುರುಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಬಳಿಕ ಮೃತನ ಪತ್ನಿ ಪಾರ್ವತಿ ಬಾಯಿ (51) ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಪುತ್ರ ಮಂಜುನಾಥ ನಾಯ್ಕನೇ ತನ್ನ ಗಂಡನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ ಸ್ಥಳಕ್ಕೆ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
05/08/2026 05:30 pm