ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಮೈಸೂರು ಪ್ರಾದೇಶಿಕ ಕಚೇರಿ, ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಮಾಗಡಿ ಯೋಜನಾ ಕಚೇರಿ ವ್ಯಾಪ್ತಿಯ ತಿಪ್ಪಸಂದ್ರ ವಲಯದ ಸಾತನೂರು ಕಾರ್ಯಕ್ಷೇತ್ರದ ಕೆಂಪುಸಾಗರ ಹಾಲು ಒಕ್ಕೂಟಕ್ಕೆ ಸಮುದಾಯ ಅಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಕಾರ್ಯಕ್ರಮವು ಜುಲೈ 31ರಂದು ಕೆಂಪುಸಾಗರ ಹಾಲು ಒಕ್ಕೂಟದ ಆವರಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, "ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನೀಡಲಾಗಿರುವ ಅನುದಾನದಿಂದ ಗ್ರಾಮಸ್ಥರಿಗೆ ಹಾಲು ಮಾರಾಟ ಮಾಡಲು ದೂರದ ಊರುಗಳಿಗೆ ತೆರಳುವ ಅನಿವಾರ್ಯತೆ ತಪ್ಪಿದೆ. ತಮ್ಮ ಗ್ರಾಮದಲ್ಲಿಯೇ ಹಾಲು ಸಂಗ್ರಹಿಸಿ ಮಾರಾಟ ಮಾಡುವ ಅವಕಾಶ ದೊರೆತಿದೆ. ಇದರಿಂದ ರೈತರಿಗೆ ಸಮಯ ಮತ್ತು ಸಾರಿಗೆ ವೆಚ್ಚ ಉಳಿತಾಯವಾಗಲಿದ್ದು, ಗ್ರಾಮೀಣ ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ" ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಯೋಜನೆಯ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ, ಉಪಾಧ್ಯಕ್ಷ ಪ್ರಭಾಕರ್, ನಿರ್ದೇಶಕರಾದ ಪರಮಶಿವಯ್ಯ, ರಾಜಶೇಖರ ಹಾಗೂ ರಾಮಕೃಷ್ಣ, ಮುಖ್ಯ ಕಾರ್ಯನಿರ್ವಾಹಕ ಯತೀಶ್, ಹಾಲು ಒಕ್ಕೂಟದ ಅಧ್ಯಕ್ಷೆ ಪ್ರಭಾವತಿ, ಬೆಂಗಳೂರು ದಕ್ಷಿಣ ಜಿಲ್ಲಾ ನಿರ್ದೇಶಕ ಜಯಕರ್ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಅಣ್ಣಪ್ಪ ಎಸ್.ಎನ್., ಸಂಘದ ಸದಸ್ಯರು, ವಲಯದ ಮೇಲ್ವಿಚಾರಕ ಮಧು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಈ ಅನುದಾನದಿಂದ ಸ್ಥಳೀಯ ಹೈನುಗಾರರಿಗೆ ಹಾಲು ಮಾರಾಟದ ವ್ಯವಸ್ಥೆ ಮತ್ತಷ್ಟು ಸುಗಮವಾಗಲಿದ್ದು, ಗ್ರಾಮೀಣ ಜನರ ಆರ್ಥಿಕಾಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.
Kshetra Samachara
02/08/2026 07:03 pm