ರಾಮನಗರ : ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಷಣ ಆರಂಭಿಸಲು ಮುಂದಾದ ವೇಳೆ ನಟ ದರ್ಶನ್ ಅಭಿಮಾನಿಗಳು ನಿರಂತರವಾಗಿ ʻಡಿ ಬಾಸ್, ಡಿ ಬಾಸ್ʼ ಎಂದು ಘೋಷಣೆ ಕೂಗಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ವೇದಿಕೆಯಲ್ಲಿ ಸಿಎಂ ಮೈಕ್ ಹಿಡಿಯುತ್ತಿದ್ದಂತೆಯೇ ಅಭಿಮಾನಿಗಳ ಘೋಷಣೆ ಜೋರಾಗಿದ್ದು, ಭಾಷಣಕ್ಕೆ ಕೆಲಕಾಲ ಅಡಚಣೆ ಉಂಟಾಗಿದೆ. ಅಷ್ಟೇ ಅಲ್ಲದೇ ಸಿಎಂ ಹಲವು ಬಾರಿ ಕುರ್ಚಿಯಿಂದ ಎದ್ದು ಮತ್ತೆ ಕುಳಿತುಕೊಳ್ಳುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ.
ಇನ್ನೂ ವೇದಿಕೆಯಲ್ಲಿದ್ದವರು ಅಭಿಮಾನಿಗಳನ್ನು ಶಾಂತಗೊಳಿಸಲು ಮನವಿ ಮಾಡಿದ್ದರೂ ಸಹ ಅಭಿಮಾನಿಗಳು ನಿರಂತರವಾಗಿ ʻಡಿ ಬಾಸ್ʼ ಜೈಕಾರ ಕೂಗುತ್ತಲೇ ಇದ್ದರು. ನಿರಂತರವಾಗಿ ʻಡಿ ಬಾಸ್, ಡಿಬಾಸ್ʼ ಘೋಷಣೆ ಕೂಗುತ್ತಿದ್ದ ಅಭಿಮಾನಿಗಳಿಗೆ ಸಿಎಂ ಕಿವಿಮಾತು ಹೇಳಿದ್ದು, ಇದು ಪವಿತ್ರವಾದ ಸಭೆ, ನಿಮ್ಮ ಅಭಿಮಾನಕ್ಕೆ ಗೌರವ ಕೊಡ್ತೀನಿ. ಆದ್ರೆ ನೀವು ಕೋರ್ಟ್ ವಿಚಾರವನ್ನು ತಂದು ನನ್ನ ಮೇಲೆ ಒತ್ತಡ ಹೇರಬೇಡಿ. ನಾನಿಲ್ಲಿ ನಿಮ್ಮ ಸೇವಕನಾಗಿ ಬಂದಿದ್ದೇನೆ. ನಾನು ಸಿಎಂ ಆಗಿರಬಹುದು, ಆದ್ರೆ ರಾಮನಗರ ಜಿಲ್ಲೆಯ ಮಗ, ಈ ನಿಮ್ಮ ಮಗನನ್ನು ಕಾಪಾಡಿಕೊಳ್ಳುವ ಕೆಲಸವನ್ನು ನೀವು ಮಾಡಬೇಕು ಎಂದರು.
ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕು, ನಾನು ದೇವರಲ್ಲಿ ಪ್ರಾರ್ಥನೆ ಮಾಡಿದಂತೆ, ನೀವು ದೇವರಲ್ಲಿ ಪ್ರಾರ್ಥನೆ ಮಾಡಿ. ಪ್ರಯತ್ನ ವಿಫಲವಾದ್ರೂ ಪ್ರಾರ್ಥನೆ ವಿಫಲವಾಗಲ್ಲ ಎಂದು ನಾನು ಈ ಹಿಂದೆ ಚಾಮುಂಡಿ ಬೆಟ್ಟದಲ್ಲಿ ಹೇಳಿದ್ದೆ. ನೀವು ಕೂಡ ಚಾಮುಂಡಿಗೆ ಪ್ರಾರ್ಥನೆ ಮಾಡಿ, ತಾಯಿ ಒಳ್ಳೆಯದು ಮಾಡ್ತಾಳೆ ಎಂದು ಹೇಳಿದ್ದಾರೆ.
PublicNext
05/08/2026 09:12 am
LOADING...