ಬಂಗಾರಪೇಟೆ (ಕೋಲಾರ): ತಮಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಂಗಾರಪೇಟೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "ಕಳೆದ 35 ವರ್ಷಗಳಿಂದ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿಯುತ್ತ ಬಂದಿದ್ದರೂ ತಮಗೆ ಸಚಿವ ಸ್ಥಾನ ನೀಡದೆ ದ್ರೋಹ ಮಾಡಲಾಗಿದೆ" ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಮ್ಮ ಅಳಲನ್ನು ತೋಡಿಕೊಂಡರು.
"ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳೆಂದರೆ ಕಾಂಗ್ರೆಸ್ ಹೈಕಮಾಂಡ್‌ಗೆ ತೀರ ಉದಾಸೀನ ಮನೋಭಾವ. ಈ ಎರಡು ಜಿಲ್ಲೆಗಳು ಸರ್ಕಾರಕ್ಕೆ ಬೇಕಾಗಿಲ್ಲ ಎಂಬಂತೆ ನಾಯಕರು ನಡೆದುಕೊಳ್ಳುತ್ತಿದ್ದಾರೆ. ಸಿಎಂ ಮತ್ತು ಡಿಸಿಎಂ ಇಬ್ಬರೂ ಸೇರಿ ಈ ಭಾಗದ ಜನರಿಗೆ ಹಾಗೂ ನಾಯಕರಿಗೆ ದೊಡ್ಡ ಮೋಸ ಮಾಡಿದ್ದಾರೆ" ಎಂದು ನೇರವಾಗಿ ಆರೋಪಿಸಿದರು. "ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅತಿಯಾಗಿ ನಂಬಿದ್ದೇ ನಮಗೆ ಅತಿಯಾದ ಹಿನ್ನಡೆಯಾಯಿತು" ಎಂದು ಬೇಸರ ವ್ಯಕ್ತಪಡಿಸಿದರು.
"ಜಿಲ್ಲೆಯ ನಾಲ್ಕು ಜನ ಶಾಸಕರು ಒಗ್ಗಟ್ಟಾಗಿ ಸಚಿವ ಸ್ಥಾನಕ್ಕಾಗಿ ಒತ್ತಾಯ ಮಾಡಿದ್ದರೂ ಕೂಡ ನಾಯಕರ ಕಡೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ತಮಗೆ ಸಚಿವ ಸ್ಥಾನ ಸಿಗದಂತೆ ತಡೆಯಲು ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರೇ ನೇರ ಕಾರಣ" ಎಂದು ಗಂಭೀರ ಆರೋಪ ಮಾಡಿದರು. "ಇಷ್ಟು ವರ್ಷಗಳ ಕಾಲ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ ತಮಗೆ ಈಗ ಅಧಿಕಾರ ನೀಡದಿದ್ದರೆ ಇನ್ನು ಯಾವಾಗ ನೀಡುತ್ತಾರೆ?" ಎಂದು ಅವರು ಪ್ರಶ್ನಿಸಿದರು.
Kshetra Samachara
03/08/2026 04:22 pm
LOADING...