ಬಂಗಾರಪೇಟೆ: ತಮಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕೋಲಾರ ಜಿಲ್ಲೆ, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕ ಎಸ್ಎನ್ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಂಗಾರಪೇಟೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ 35 ವರ್ಷಗಳಿಂದ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದರೂ ತಮಗೆ ಸಚಿವ ಸ್ಥಾನ ನೀಡದೆ ದ್ರೋಹ ಮಾಡಲಾಗಿದೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಅಳಲನ್ನು ತೋಡಿಕೊಂಡರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳೆಂದರೆ ಕಾಂಗ್ರೆಸ್ ಹೈಕಮಾಂಡ್ ಗೆ ತೀರಾ ಉದಾಸೀನ ಮನೋಭಾವ. ಈ ಎರಡು ಜಿಲ್ಲೆಗಳು ಸರ್ಕಾರಕ್ಕೆ ಬೇಕಾಗಿಲ್ಲ ಎಂಬಂತೆ ನಾಯಕರು ನಡೆದುಕೊಳ್ಳುತ್ತಿದ್ದಾರೆ. ಸಿಎಂ- ಡಿಸಿಎಂ ಇಬ್ಬರೂ ಸೇರಿ ಈ ಭಾಗದ ಜನರಿಗೆ ಹಾಗೂ ನಾಯಕರಿಗೆ ದೊಡ್ಡ ಮೋಸ ಮಾಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯನವರನ್ನು ಅತಿಯಾಗಿ ನಂಬಿದ್ದೇ ತಮಗೆ ಅತಿಯಾದ ಹಿನ್ನಡೆ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯ ನಾಲ್ಕು ಜನ ಶಾಸಕರು ಒಗ್ಗಟ್ಟಾಗಿ ಸಚಿವ ಸ್ಥಾನಕ್ಕಾಗಿ ಒತ್ತಾಯ ಮಾಡಿದ್ದರೂ ಕೂಡ ನಾಯಕರ ಕಡೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ನಮಗೆ ಸಿಗುತ್ತಿಲ್ಲ. ತಮಗೆ ಸಚಿವ ಸ್ಥಾನ ಸಿಗದಂತೆ ತಡೆಯಲು ಸಚಿವ ಕೆಎಚ್ ಮುನಿಯಪ್ಪ, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರೇ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇಷ್ಟು ವರ್ಷಗಳ ಕಾಲ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ ತಮಗೆ ಈಗ ಅಧಿಕಾರ ನೀಡದಿದ್ದರೆ ಇನ್ನು ಯಾವಾಗ ನೀಡುತ್ತಾರೆ ಎಂದು ಪ್ರಶ್ನಿಸಿದರು.
PublicNext
03/08/2026 05:48 pm