ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯದಲ್ಲೇ ಬಂಗಾರದ ಪದಕ: ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಇಶಾನಿ ರೆಡ್ಡಿ!

ಬೆಂಗಳೂರು: ಬೆಂಗಳೂರಿನ ವಿದ್ಯಾರಣ್ಯಪುರದ 6 ವರ್ಷದ ಬಾಲಕಿ ಇಶಾನಿ ಎಚ್. ರೆಡ್ಡಿ, ತಮಿಳುನಾಡಿನ ಊಟಿಯಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ ರಾಜ್ಯ ಹಾಗೂ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ!

ವಿದ್ಯಾರಣ್ಯಪುರದ ಎಂಇಎಸ್ (MES) ಶಾಲೆಯಲ್ಲಿ 1ನೇ ತರಗತಿ ಓದುತ್ತಿರುವ ಇಶಾನಿ, 'ಕಲ್ಚರೆಕ್ಸ್ ವೈಬ್ಸ್' (Culturex Vibes) ಕರಾಟೆ ಶಾಲೆಯ ವಿದ್ಯಾರ್ಥಿನಿ. ಇತ್ತೀಚೆಗೆ ಊಟಿಯ ವೈಡಬ್ಲ್ಯೂಸಿಎ (YWCA) ಆನಂದಗಿರಿ ಹಾಲ್‌ನಲ್ಲಿ ನಡೆದ "4ನೇ ಒಕಿನಾವಾ ಗೋಜು ರ್ಯೂ ಅಂತರರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್‌ಶಿಪ್-2026"ರ ಆರೆಂಜ್ ಬೆಲ್ಟ್ ವಿಭಾಗದಲ್ಲಿ ಸ್ಪರ್ಧಿಸಿ ಈ ಸಾಧನೆ ಮಾಡಿದ್ದಾರೆ.

'ಸಂಕುಕಾಯ್' (SANKUKAI) ಫೆಡರೇಶನ್ ಆಫ್ ಕರಾಟೆ ನೇತೃತ್ವದಲ್ಲಿ ನಡೆದ ಈ ಬೃಹತ್ ಕೂಟದಲ್ಲಿ ಬರೋಬ್ಬರಿ 9 ದೇಶಗಳ ಕರಾಟೆ ಪಟುಗಳು ಭಾಗವಹಿಸಿದ್ದರು.

ಕರ್ನಾಟಕ ಕ್ರೀಡಾ ಕರಾಟೆ ತಂಡದ ಮುಖ್ಯ ಕೋಚ್ ಸಿ. ಕೆ. ಚಂಗಪ್ಪ ಅವರ ಗರಡಿಯಲ್ಲಿ ತರಬೇತಿ ಪಡೆದಿರುವ ಇಶಾನಿಗೆ, ಇದು ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯಾವಳಿಯಾಗಿತ್ತು. ತಮ್ಮ ಮೊದಲ ಪ್ರಯತ್ನದಲ್ಲೇ ಅದ್ಭುತ ಪ್ರದರ್ಶನ ನೀಡಿದ ಇಶಾನಿ, ಪ್ರಥಮ ಸ್ಥಾನ ಗಳಿಸಿ ಕಪ್ ಎತ್ತಿಹಿಡಿದರು.

ಮಲೇಷಿಯಾದ ಮಹಾಗುರು ಹಾಗೂ 'ಒಕಿನಾವಾ ಗೋಜು-ರ್ಯೂ' ಶೈಲಿಯ ಮುಖ್ಯಸ್ಥರಾದ ಗ್ರ್ಯಾಂಡ್ ಮಾಸ್ಟರ್ ಸೋಕೆ ಸರ್ ಕೆ. ಅನಂತನ್ (10ನೇ ಡ್ಯಾನ್ ಬ್ಲಾಕ್ ಬೆಲ್ಟ್) ಅವರು ಇಶಾನಿಗೆ ವಿಜೇತ ಟ್ರೋಫಿ ಪ್ರದಾನ ಮಾಡಿ ಗೌರವಿಸಿದರು.

ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದ ಇಶಾನಿಯ ಈ ಸಾಧನೆಗೆ ಕರಾಟೆ ಸ್ಕೂಲ್, ಶಾಲಾ ಮಂಡಳಿ ಹಾಗೂ ಕ್ರೀಡಾಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Edited By :
PublicNext

PublicNext

03/08/2026 08:00 pm

Cinque Terre

10.52 K

Cinque Terre

0