ಕೋಲಾರ: ಕೋಲಾರ ಜಿಲ್ಲೆಗೆ ಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ, ಅದರಲ್ಲೂ ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಆಕ್ರೋಶ ಹೊರಹಾಕಿದ್ದಾರೆ.
ಕೋಲಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ ಎಲ್ಲಿದೆ?" ಎಂದು ಸ್ವಪಕ್ಷದ ವಿರುದ್ಧವೇ ಹರಿಹಾಯ್ದಿದ್ದಾರೆ.
"ಕಾಂಗ್ರೆಸ್ ಹೈಕಮಾಂಡ್ ಕೋಲಾರ ಜಿಲ್ಲೆಯನ್ನು ಕಡೆಗಣಿಸಿದೆ. ನಾವೆಲ್ಲಾ ಶಾಸಕರು ಸಚಿವ ಸ್ಥಾನ ಪಡೆಯಲು ಸಮರ್ಥರಲ್ಲ ಎನ್ನುವುದು ನಮಗೆ ತೀವ್ರ ಬೇಸರ ತಂದಿದೆ," ಎಂದು ನಂಜೇಗೌಡ ಅಸಮಾಧಾನ ಹೊರಹಾಕಿದ್ದಾರೆ. "ಮಾಲೂರು ಸೇರಿದಂತೆ ಕೋಲಾರ ಜಿಲ್ಲೆಯ ಎಲ್ಲೆಡೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾ, ಬಲಿಷ್ಠವಾಗಿ ಪಕ್ಷ ಕಟ್ಟಿದ್ದೇವೆ," ಎಂದು ಅವರು ಪ್ರತಿಪಾದಿಸಿದ್ದಾರೆ.
"ಕೋಲಾರ, ಮಾಲೂರು, ಬಂಗಾರಪೇಟೆ ಸೇರಿ ಎಲ್ಲಾ ಶಾಸಕರು ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಬಂದವರು. ನಮಗೆಲ್ಲಾ ದೊಡ್ಡ ಇತಿಹಾಸ ಇಲ್ಲದಿರಬಹುದು, ಆದರೆ ನಾವೇ ಕಾಂಗ್ರೆಸ್‌ಗೆ ಆಸ್ತಿಯಾಗಿದ್ದೇವೆ," ಎಂದು ಶಾಸಕ ನಂಜೇಗೌಡ ಹೇಳಿದ್ದಾರೆ. "ಕೆಲವು ಜಿಲ್ಲೆಗಳಿಗೆ ಎರಡೆರಡು ಸಚಿವ ಸ್ಥಾನ ಸಿಕ್ಕಿದೆ. ಆದರೆ ಹೊಸಬರಿಗೆ ಅವಕಾಶ ನೀಡಬೇಕಿತ್ತು, ಸಾಮಾಜಿಕ ನ್ಯಾಯ ನೀಡುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ," ಎಂದು ಕಿಡಿಕಾರಿದ್ದಾರೆ.
"ಕಾಂಗ್ರೆಸ್ ಹೈಕಮಾಂಡ್ ಸೇರಿದಂತೆ ಎಲ್ಲರೂ ನಮ್ಮನ್ನು ಕೀಳಾಗಿ ನೋಡುತ್ತಿದ್ದಾರೆ ಎನ್ನುವ ಬೇಸರ ಇದೆ. ಸಾಮಾಜಿಕ ನ್ಯಾಯ ಬಿಟ್ಟು ಕಾಂಗ್ರೆಸ್ ಬೇರೆ ದಾರಿ ಹಿಡಿದಿದೆ," ಎಂದು ತಿಳಿಸಿದರು.
PublicNext
04/08/2026 03:16 pm
LOADING...