ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲೆಗಳ ಅಡುಗೆ ಕೋಣೆಗಳಿಂದ ಗ್ಯಾಸ್ ಸಿಲಿಂಡರ್ ಕದಿಯುತ್ತಿದ್ದ ಕಿಲಾಡಿ ಗ್ಯಾಂಗ್ ಬಂಧನ - 55 ಸಿಲಿಂಡರ್, ಕಾರು ಜಪ್ತಿ!

ಬೀದರ್: ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ ಅಡುಗೆ ಕೋಣೆಗಳಿಂದ ಗ್ಯಾಸ್ ಸಿಲಿಂಡರ್‌ಗಳನ್ನು ಕಳವು ಮಾಡುತ್ತಿದ್ದ ನಾಲ್ವರ ಖತರ್ನಾಕ್ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಬೀದರ್ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 9 ಪ್ರಕರಣಗಳನ್ನು ಭೇದಿಸಲಾಗಿದ್ದು, ಸುಮಾರು ₹9.75 ಲಕ್ಷ ಮೌಲ್ಯದ ಮುದ್ದೇಮಾಲನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಳವು ಪ್ರಕರಣಗಳು ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ 4, ಮೇಹಕರ್ ಠಾಣೆಯ 3 ಮತ್ತು ಖಟಕ ಚಿಂಚೋಳಿ ಠಾಣೆಯ 2 ಪ್ರಕರಣಗಳು ಸೇರಿ ಒಟ್ಟು 9 ಪ್ರಕರಣಗಳಿಗೆ ಸಂಬಂಧಿಸಿವೆ.

ಆಗಸ್ಟ್ 2ರಂದು ಕಳವು ಮಾಡಿದ ಗ್ಯಾಸ್ ಸಿಲಿಂಡರ್‌ಗಳನ್ನು ಮಾರಾಟ ಮಾಡಲು ಮಹಾರಾಷ್ಟ್ರದ ಉದಗೀರ್ ಕಡೆಗೆ ಕಾರಿನಲ್ಲಿ ಸಾಗಿಸುತ್ತಿರುವ ಕುರಿತು ಭಾಲ್ಕಿ ಗ್ರಾಮೀಣ ಪಿಎಸ್‌ಐ ಅಶೋಕ ಪಾಟೀಲ್ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹೆಚ್ಚುವರಿ ಎಸ್‌ಪಿ ಚಂದ್ರಕಾಂತ ಪೂಜಾರಿ ಹಾಗೂ ಭಾಲ್ಕಿ ಡಿಎಸ್‌ಪಿ ಬಲಪ್ಪ ನಂದಗಾವಿ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಹಣಮರೆಡ್ಡಪ್ಪ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು.

ವಿಶೇಷ ತಂಡವು ಸಾಕ್ಷಿಗಳೊಂದಿಗೆ (ಪಂಚರು) ಬೀದರ್-ಉದಗೀರ್ ರಸ್ತೆಯ 'ಬೀರಿ ಬಿ ಕ್ರಾಸ್' ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಅನುಮಾನಾಸ್ಪದವಾಗಿ ಬಂದ ಕಾರನ್ನು ತಡೆದು ಪರಿಶೀಲಿಸಲಾಯಿತು. ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಕಳವಿನ ಜಾಲ ಬಯಲಾಗಿದೆ.

ಬಂಧಿತ ಆರೋಪಿಗಳು ಭಾಲ್ಕಿ ತಾಲೂಕಿನ 27, ಹುಮನಾಬಾದ್‌ನ 8 ಮತ್ತು ಬಸವಕಲ್ಯಾಣ ತಾಲೂಕಿನ 1 ಸೇರಿದಂತೆ ವಿವಿಧ ಶಾಲೆಗಳ ಅಡುಗೆ ಕೋಣೆಗಳ ಬೀಗ ಮುರಿದು ರಾತ್ರಿ ವೇಳೆ ಸಿಲಿಂಡರ್‌ಗಳನ್ನು ಕದಿಯುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಕಳವು ಮಾಡಿದ ಸಿಲಿಂಡರ್‌ಗಳನ್ನು ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಳಿಯ ಚಹಾ ಹೋಟೆಲ್ ಒಂದರಲ್ಲಿ ಅಡಗಿಸಿಟ್ಟಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ₹2.75 ಲಕ್ಷ ಮೌಲ್ಯದ 55 ಗ್ಯಾಸ್ ಸಿಲಿಂಡರ್‌ಗಳು (ಭಾರತ್ ಗ್ಯಾಸ್- 33, ಇಂಡೇನ್- 16, ಎಚ್‌ಪಿ- 6) ಹಾಗೂ ಕೃತ್ಯಕ್ಕೆ ಬಳಸಿದ್ದ ₹7 ಲಕ್ಷ ಮೌಲ್ಯದ ಕಾರು ಸೇರಿದಂತೆ ಒಟ್ಟು ₹9.75 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.

ಬಂಧಿತ ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣವನ್ನು ಅತ್ಯಂತ ಯಶಸ್ವಿಯಾಗಿ ಭೇದಿಸಿದ ಸಿಪಿಐ ಹಣಮರೆಡ್ಡಪ್ಪ, ಪಿಎಸ್‌ಐ ಅಶೋಕ ಪಾಟೀಲ್ ಹಾಗೂ ತನಿಖಾ ತಂಡದ ಕಾರ್ಯಾಚರಣೆಯನ್ನು ಎಸ್‌ಪಿ ಪ್ರದೀಪ್ ಗುಂಟಿ ಅಭಿನಂದಿಸಿದ್ದಾರೆ.

Edited By :
Kshetra Samachara

Kshetra Samachara

04/08/2026 05:00 pm

Cinque Terre

540

Cinque Terre

0