ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈನಲ್ಲಿ ಎಂ. ಬಿ. ಪಾಟೀಲ್ ರೋಡ್ ಶೋ ಯಶಸ್ವಿ : ಜಿಂದಾಲ್ ಸಮೂಹದಿಂದ ರಾಜ್ಯದಲ್ಲಿ 1.20 ಲಕ್ಷ ಕೋಟಿ ಹೂಡಿಕೆ!

ಮುಂಬೈ/ಬೆಂಗಳೂರು: ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ ಆಕರ್ಷಿಸಲು ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ 'ರೋಡ್ ಶೋ' ಯಶಸ್ವಿಯಾಗಿದ್ದು, ಜಿಂದಾಲ್ ಸಮೂಹವು ಕರ್ನಾಟಕದಲ್ಲಿ ಮುಂದಿನ 5 ವರ್ಷಗಳಲ್ಲಿ ₹1.20 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಂಗಳವಾರ ತಿಳಿಸಿದ್ದಾರೆ.

ಸಚಿವ ಸಂಪುಟ ಪುನಾರಚನೆ ಮುಗಿದ ತಕ್ಷಣವೇ ಮುಂಬೈಗೆ ಪ್ರಯಾಣ ಬೆಳೆಸಿದ್ದ ಸಚಿವರು, ಜಿಂದಾಲ್ ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್ ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕ (JMD) ಜಯಂತ್ ಆಚಾರ್ಯ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.

ಸಭೆಯ ಬಳಿಕ ಮಾತನಾಡಿದ ಸಚಿವರು, "ಉಕ್ಕು ತಯಾರಿಕೆಯಿಂದ ಹಿಡಿದು ಬಣ್ಣದ ಉತ್ಪಾದನೆವರೆಗೂ ವಿವಿಧ ವಲಯಗಳಲ್ಲಿ ಮುಂಚೂಣಿಯಲ್ಲಿರುವ ಜೆಎಸ್‌ಡಬ್ಲ್ಯೂ (JSW) ಕಂಪನಿಯು ಕರ್ನಾಟಕವನ್ನು ಬಂಡವಾಳ ಹೂಡಿಕೆಗೆ ಅತ್ಯಂತ ನೆಚ್ಚಿನ ತಾಣವೆಂದು ಪರಿಗಣಿಸಿದೆ. ಕಳೆದ ಮೂರು ದಶಕಗಳಿಂದ ಬಳ್ಳಾರಿ ಮತ್ತು ವಿಜಯನಗರ ಭಾಗದ ಕೈಗಾರಿಕಾ ಕ್ರಾಂತಿಗೆ ಜಿಂದಾಲ್ ಕಾರಣವಾಗಿದ್ದು, ಈಗಾಗಲೇ ₹1.30 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಮುಂಬರುವ ₹1.20 ಲಕ್ಷ ಕೋಟಿ ಹೊಸ ಹೂಡಿಕೆಗೆ ಸರ್ಕಾರದಿಂದ ಅಗತ್ಯವಿರುವ ಸಕಲ ಮೂಲಭೂತ ಸೌಕರ್ಯ ಮತ್ತು ನೆರವು ನೀಡಲಾಗುವುದು" ಎಂದು ಹೇಳಿದರು.

ಕೈಗಾರಿಕಾ ಸಚಿವರ ಈ ಭೇಟಿಯ ವೇಳೆ ಎಲ್ ಅಂಡ್ ಟಿ (L&T), ಬಿಸ್ಲೆರಿ, ರೇಮಂಡ್ಸ್, ಟಾರ್ಕ್-ಹೀರಾನಂದಾನಿ, ಸನೋಫಿ ಹೆಲ್ತ್, ಮ್ಯಾಗ್ನಂ, ಬಾಲು ಫೋರ್ಜ್ ಹಾಗೂ ಮ್ಯಾಕ್ಸ್ ಏರೋಸ್ಪೇಸ್ ಸೇರಿದಂತೆ 10ಕ್ಕೂ ಹೆಚ್ಚು ಪ್ರಮುಖ ಕಂಪನಿಗಳ ಸಿಇಒ ಹಾಗೂ ನಾಯಕರೊಂದಿಗೆ ಫಲಪ್ರದ ಮಾತುಕತೆ ನಡೆಸಲಾಗಿದೆ.

ಬಾಟಲಿ ನೀರು ಉತ್ಪಾದನೆಯ ಪ್ರಮುಖ ಸಂಸ್ಥೆ ಬಿಸ್ಲೆರಿ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಆಸಕ್ತಿ ತೋರಿದ್ದು, ನೀರಿನ ಸಮೃದ್ಧಿ ಇರುವ ವಿಜಯಪುರ ಅಥವಾ ಚಾಮರಾಜನಗರ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಕೋರಲಾಗಿದೆ. ಇದರಿಂದ ಸುಮಾರು 2,000 ಉದ್ಯೋಗಗಳು ಸೃಷ್ಟಿಯಾಗಲಿವೆ.

ಜೀನ್ಸ್ ಬಟ್ಟೆ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿರುವ ರೇಮಂಡ್ ಲೈಫ್‌ಸ್ಟೈಲ್ ಲಿಮಿಟೆಡ್ ಕಂಪನಿಗೆ ಕಚ್ಚಾವಸ್ತು ಹಾಗೂ ಮಾರುಕಟ್ಟೆ ಅನುಕೂಲತೆಗಳನ್ನು ಪರಿಗಣಿಸಿ ಬಳ್ಳಾರಿ ಅಥವಾ ವಿಜಯಪುರದಲ್ಲಿ ಹೂಡಿಕೆ ಮಾಡುವಂತೆ ಸಚಿವರು ಸಲಹೆ ನೀಡಿದ್ದಾರೆ.

Edited By :
PublicNext

PublicNext

04/08/2026 07:43 pm

Cinque Terre

14.38 K

Cinque Terre

0

ಸಂಬಂಧಿತ ಸುದ್ದಿ