ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಂಡರಬಾಳು ನವೋದಯದಲ್ಲಿ ಸಂಸ್ಥಾಪನಾ ದಿನ ಸಂಭ್ರಮ

ಚಾಮರಾಜನಗರ : ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಮರಾಜನಗರ ತಾಲೂಕಿನ ಹೊಂಡರಬಾಳುವಿನ ಪಿ.ಎಂ. ಶ್ರೀ ಶಾಲೆ ಜವಾಹರ್ ನವೋದಯ ವಿದ್ಯಾಲಯ (ಜೆಎನ್‌ವಿ)ದಲ್ಲಿ ನವೋದಯ ಸಂಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಆಗಸ್ಟ್ 5, 1986ರಂದು ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಆರಂಭಗೊಂಡ ನವೋದಯ ವಿದ್ಯಾಲಯಗಳು ಇಂದು ದೇಶಾದ್ಯಂತ 661 ಶಾಲೆಗಳ ಜಾಲವನ್ನು ಹೊಂದಿದ್ದು, ಗ್ರಾಮೀಣ ಪ್ರದೇಶದ 3.60 ಲಕ್ಷಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಶಿಕ್ಷಣ, ಆಹಾರ ಹಾಗೂ ಕ್ರೀಡಾ ತರಬೇತಿ ನೀಡುತ್ತಿವೆ.

ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಸತತ ಉತ್ತಮ ಸಾಧನೆ ಮಾಡುತ್ತಿರುವ ನವೋದಯ ವಿದ್ಯಾರ್ಥಿಗಳು ಐಐಟಿ, ಏಮ್ಸ್, ಎನ್‌ಐಟಿ ಸೇರಿದಂತೆ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ.

ಚಿತ್ರಕಲೆ, ರಂಗಭೂಮಿ, ನೃತ್ಯ, ಸಾಹಿತ್ಯ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ವಿಶೇಷ ವಲಸೆ ಯೋಜನೆ ಮೂಲಕ ವಿವಿಧ ರಾಜ್ಯಗಳ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರಿಯುವ ಅವಕಾಶ ಲಭಿಸುತ್ತಿದ್ದು, ರಾಷ್ಟ್ರೀಯ ಏಕತೆ ಬಲಪಡುತ್ತಿದೆ.

ಎಸ್‌ಜಿಎಫ್‌ಐ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ನವೋದಯದ ಹಳೆಯ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಐಎಫ್‌ಎಸ್, ಸಶಸ್ತ್ರ ಪಡೆಗಳು, ವೈದ್ಯಕೀಯ, ಇಂಜಿನಿಯರಿಂಗ್, ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸಂಸ್ಥೆಯ ಹೆಮ್ಮೆಯ ವಿಷಯವಾಗಿದೆ.

ಸಂಸ್ಥಾಪನಾ ದಿನದಂದು ಗ್ರಾಮೀಣ ಮಕ್ಕಳಿಗೆ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ಒದಗಿಸುವ ದೂರದೃಷ್ಟಿಯನ್ನು ಜವಾಹರ್ ನವೋದಯ ವಿದ್ಯಾಲಯ ಪುನರುಚ್ಚರಿಸಿದೆ. ಜವಾಬ್ದಾರಿಯುತ, ಕರುಣಾಮಯ ಮತ್ತು ಸಮರ್ಥ ನಾಗರಿಕರನ್ನು ರೂಪಿಸುವ ಬದ್ಧತೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದೆ.

“ಶಿಕ್ಷಣದಲ್ಲಿ ಶ್ರೇಷ್ಠತೆ, ವೈವಿಧ್ಯತೆಯಲ್ಲಿ ಏಕತೆ ಮತ್ತು ರಾಷ್ಟ್ರ ಸೇವೆ” ಎಂಬ ಧ್ಯೇಯವಾಕ್ಯವು ಪ್ರತಿಯೊಬ್ಬ ನವೋದಯ ವಿದ್ಯಾರ್ಥಿಗೆ ಉನ್ನತ ಸಾಧನೆ ಹಾಗೂ ಸಮಾಜ ಸೇವೆಗೆ ಪ್ರೇರಣೆಯಾಗುತ್ತಿದೆ ಎಂದು ವಿದ್ಯಾಲಯದ ಪ್ರಭಾರ ಪ್ರಾಂಶುಪಾಲ ಎಸ್.ಎ. ರೆಹ್ಮಾನ್ ತಿಳಿಸಿದ್ದಾರೆ.

Edited By : PublicNext Desk
PublicNext

PublicNext

05/08/2026 10:58 am

Cinque Terre

3.02 K

Cinque Terre

0