ಮಂಗಳೂರು : ಸುಪ್ರೀಂ ಕೋರ್ಟ್ ನಿಂದ ಅರೆಸ್ಟ್ ವಾರಂಟ್ ಜಾರಿಯಾಗಿದೆ ಎಂದು ನಂಬಿಸಿ 66 ವರ್ಷದ ಹಿರಿಯ ನಾಗರಿಕೆಯೊಬ್ಬರಿಂದ ₹34.48 ಲಕ್ಷ ವಂಚಿಸಿರುವ ಡಿಜಿಟಲ್ ಅರೆಸ್ಟ್ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಜುಲೈ 10ರಂದು ಅಪರಿಚಿತ ವ್ಯಕ್ತಿಯೊಬ್ಬ ದೂರುದಾರೆಗೆ ಕರೆ ಮಾಡಿ ತಾನು "ಡಾಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾ"ದ ಅಧಿಕಾರಿ ಅಮನ್ ಕುಮಾರ್ ಶರ್ಮಾ ಎಂದು ಪರಿಚಯಿಸಿಕೊಂಡಿದ್ದಾನೆ. ದೂರುದಾರರ ಗುರುತಿನ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಸಿಮ್ ಕಾರ್ಡ್ ಪಡೆದು ಸೈಬರ್ ಅಪರಾಧ ನಡೆಸಲಾಗಿದೆ ಎಂದು ಹೇಳಿ, ಹೆಚ್ಚಿನ ಮಾಹಿತಿಗಾಗಿ ಮುಂಬೈನ ಕೊಲಬಾ ಪೊಲೀಸ್ ಠಾಣೆಯೊಂದಿಗೆ ಮಾತನಾಡುವಂತೆ ಕರೆ ವರ್ಗಾಯಿಸಿದ್ದಾನೆ.
ಬಳಿಕ ಕೊಲಬಾ ಪೊಲೀಸರಂತೆ ಮಾತನಾಡಿದ ವಂಚಕರು, "ದೂರುದಾರರ ದಾಖಲೆಗಳನ್ನು ಬಳಸಿ ಒ.ಎಂ. ಅಬ್ದುಲ್ ಸಲಾಮ್ ಎಂಬಾತ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು ಸುಮಾರು ₹2 ಕೋಟಿ ಅಕ್ರಮ ಹಣ ವರ್ಗಾವಣೆ ನಡೆಸಿದ್ದಾನೆ. ಈ ಪ್ರಕರಣದಲ್ಲಿ ದೂರುದಾರರಿಗೂ ₹20 ಲಕ್ಷ ಕಮಿಷನ್ ಬಂದಿದ್ದು, ಅವರ ವಿರುದ್ಧ ಸುಪ್ರೀಂ ಕೋರ್ಟ್ ಅರೆಸ್ಟ್ ವಾರಂಟ್ ಜಾರಿಯಾಗಿದೆ" ಎಂದು ಸುಳ್ಳು ಮಾಹಿತಿ ನೀಡಿ ಬೆದರಿಸಿದ್ದಾರೆ.
ಪ್ರಕರಣದಿಂದ ಪಾರಾಗಬೇಕಾದರೆ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪರಿಶೀಲನೆಗಾಗಿ ವರ್ಗಾಯಿಸಬೇಕು, ತನಿಖೆ ಪೂರ್ಣಗೊಂಡ ಬಳಿಕ ಹಣವನ್ನು ಮರಳಿ ನೀಡಲಾಗುವುದು ಎಂದು ನಂಬಿಸಿದ್ದಾರೆ.
ವಂಚಕರ ಮಾತು ನಂಬಿದ ಹಿರಿಯ ನಾಗರಿಕೆ ಜುಲೈ 12ರಿಂದ 27ರ ಅವಧಿಯಲ್ಲಿ ವಿವಿಧ ಹಂತಗಳಲ್ಲಿ ಆರ್‌ಟಿಜಿಎಸ್ (RTGS) ಮೂಲಕ ಒಟ್ಟು ₹34,48,094 ಗಳನ್ನು ಅವರು ಸೂಚಿಸಿದ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಬಳಿಕ ವಂಚಕರು ಸಂಪರ್ಕ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪರಿಚಯಸ್ಥರೊಂದಿಗೆ ವಿಚಾರಿಸಿದಾಗ ತಾವು 'ಡಿಜಿಟಲ್ ಅರೆಸ್ಟ್' ಹೆಸರಿನ ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.
ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಮಂಗಳೂರು ನಗರದ ಸಿಇಎನ್ (CEN) ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
PublicNext
05/08/2026 06:05 pm