ಮಂಗಳೂರು : ಶೂ ಧರಿಸಬಾರದೆಂದು ಇಬ್ಬರು ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿ ಹಲ್ಲೆ ನಡೆಸಿರುವ ಆರೋಪದಲ್ಲಿ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತರು ಮತ್ತು ಆರೋಪಿಗಳು ಎಲ್ಲರೂ ಕೇರಳ ಮೂಲದವರಾಗಿದ್ದು, ಮಂಗಳೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಬಂಧಿತ ಐವರು ಲಾಜಿಸ್ಟಿಕ್ಸ್ ಡಿಪ್ಲೊಮಾದ ದ್ವಿತೀಯ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಗಳಲ್ಲಿ ಒಬ್ಬ ಬಿಬಿಎ ಹಾಗೂ ಮತ್ತೊಬ್ಬ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಮಂಗಳೂರಿನ ಮೋರ್ಗನ್‌ಗೇಟ್ ಬಳಿಯ ಗುಜ್ಜರಕೆರೆಯ ಚಹಾ ಅಂಗಡಿಯೊಂದರ ಬಳಿ ಆರೋಪಿಗಳು "ತಾವು ಶೂ ಧರಿಸಬಾರದು" ಎಂದು ಧಮ್ಕಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿಗಳು ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ವಿದ್ಯಾರ್ಥಿಗಳನ್ನು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಬಂದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ತಮ್ಮ ತಂಡದಲ್ಲಿ ಐವರು ಮಾತ್ರ ಇದ್ದರು ಎಂದು ಹೇಳಿದ್ದಾರೆ. ಆದರೆ ಸಂತ್ರಸ್ತರು ಒಟ್ಟು ಆರು ಮಂದಿ ಹಲ್ಲೆ ನಡೆಸಿದ್ದರು ಎಂದು ತಿಳಿಸಿದ್ದಾರೆ. ಆದ್ದರಿಂದ ಸಂತ್ರಸ್ತರು ಮತ್ತೋರ್ವ ಆರೋಪಿಯನ್ನು ಗುರುತಿಸಬೇಕಾಗಿದೆ. ಸದ್ಯ ಗುರುತಿಸಲಾದ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ನಾಳೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
05/08/2026 09:45 pm
LOADING...