ಸಾಗರ: ಮಲೆನಾಡು ಭಾಗದ ಸಾಗರ ತಾಲೂಕಿನಲ್ಲಿ ಕಳೆದ ಎರಡು-ಮೂರು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿಶ್ವಪ್ರಸಿದ್ಧ ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ. ಶರಾವತಿ ನದಿಯ ಹರಿವು ಹೆಚ್ಚಾಗಿದ್ದು, ರಾಜ, ರಾಣಿ, ರೋರರ್ ಹಾಗೂ ರಾಕೆಟ್ ಎಂಬ ನಾಲ್ಕು ಭವ್ಯ ಧಾರೆಗಳು ಭೋರ್ಗರೆಯುತ್ತಾ ಧುಮುಕುತ್ತಿವೆ. ಮಳೆಯಿಂದಾಗಿ ಜಲಪಾತದ ರಮಣೀಯ ದೃಶ್ಯ ಕಣ್ಮನ ಸೆಳೆಯುತ್ತಿದ್ದು, ಈ ಮನಮೋಹಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಜೋಗದತ್ತ ಹರಿದು ಬರುತ್ತಿದ್ದಾರೆ.
ಜಲಪಾತದ ಮುಂಭಾಗದಲ್ಲಿ ನಿಂತು ಪ್ರವಾಸಿಗರು ಪ್ರಕೃತಿಯ ಈ ಅದ್ಭುತ ಸೌಂದರ್ಯವನ್ನು ವೀಕ್ಷಿಸುತ್ತಾ, ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆದುಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಹಸಿರಿನ ನಡುವೆ ಧುಮುಕುವ ಬಿಳಿ ಹಾಲಿನಂತಿರುವ ಜಲಧಾರೆಯ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಿದೆ. ಮಳೆ ಮತ್ತು ಮಂಜಿನ ವಾತಾವರಣದ ನಡುವೆ ಜಲಪಾತದ ಸೊಬಗು ಮತ್ತಷ್ಟು ಇಮ್ಮಡಿಗೊಂಡಿದ್ದು, ಪ್ರವಾಸಿಗರು ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳೆಯುತ್ತಾ ಮೈಮರೆಯುತ್ತಿದ್ದಾರೆ.
ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೋಗ ನಿರ್ವಹಣಾ ಪ್ರಾಧಿಕಾರ ಹಾಗೂ ಸ್ಥಳೀಯ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಜಲಪಾತ ವೀಕ್ಷಣೆಗೆ ನಿಗದಿತ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ. ಪ್ರಕೃತಿ ಪ್ರೇಮಿಗಳಿಗೆ ಹಾಗೂ ವಾರಾಂತ್ಯದ ರಜೆಯನ್ನು ಕಳೆಯಲು ಬಯಸುವವರಿಗೆ ಜೋಗ ಜಲಪಾತ ಇದೀಗ ನೆಚ್ಚಿನ ತಾಣವಾಗಿ ಮಾರ್ಪಟ್ಟಿದ್ದು, ಮಲೆನಾಡಿನ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಬಂದಂತಾಗಿದೆ.
ವರದಿ: ಜಮೀಲ್, ಪಬ್ಲಿಕ್ ನೆಕ್ಸ್ಟ್ ಸಾಗರ
PublicNext
05/08/2026 06:41 pm
LOADING...