ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹೊಸನಗರ ತಾಲೂಕಿನಲ್ಲಿ ಭೂಕುಸಿತ ಸಂಭವಿಸಿದೆ. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಹೊಸನಗರ ತಾಲೂಕಿನ ರಾವೇ ಗ್ರಾಮದ ದೊಡ್ಡನಗದ್ದೆ ಪ್ರದೇಶದಲ್ಲಿ ಗುಡ್ಡ ಕುಸಿದಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ನಿರಂತರ ಮಳೆಯ ಪರಿಣಾಮವಾಗಿ ಗ್ರಾಮದ ನಿವಾಸಿ ವೀರಪ್ಪಗೌಡ ಎಂಬುವವರ ಮನೆಯ ಪಕ್ಕದಲ್ಲಿದ್ದ ಗುಡ್ಡ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಈ ಅನಾಹುತದಲ್ಲಿ ವೀರಪ್ಪಗೌಡ ಅವರ ನಿವಾಸ, ದನದ ಕೊಟ್ಟಿಗೆ ಹಾಗೂ ಪಕ್ಕದ ರಸ್ತೆಗೆ ತೀವ್ರ ಹಾನಿಯಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ.
ಗುಡ್ಡ ಕುಸಿತದ ರಭಸಕ್ಕೆ ಅಪಾರ ಪ್ರಮಾಣದ ಮಣ್ಣು ಮತ್ತು ಕಲ್ಲುಗಳು ರಸ್ತೆಯ ಮೇಲೆ ಬಿದ್ದಿದ್ದು, ರಸ್ತೆ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಪರಿಣಾಮವಾಗಿ ಈ ಭಾಗದಲ್ಲಿ ವಾಹನ ಹಾಗೂ ಸಾರ್ವಜನಿಕರ ಸಂಚಾರ ತೀವ್ರ ಅಡಚಣೆಗೊಳಗಾಗಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಂತಾಗಿದೆ.
"ನಮ್ಮ ಗ್ರಾಮದಲ್ಲಿ ಮಳೆಗಾಲ ಬಂತೆಂದರೆ ಈ ಪ್ರದೇಶದಲ್ಲಿ ಗುಡ್ಡ ಕುಸಿತ ಸಾಮಾನ್ಯವಾಗಿದೆ. ಪ್ರತಿವರ್ಷವೂ ನಾವು ಭೀತಿಯಲ್ಲೇ ದಿನ ದೂಡಬೇಕಾಗಿದೆ. ಈ ಕುರಿತು ಹಲವು ಬಾರಿ ಸ್ಥಳೀಯ ಶಾಸಕರು ಹಾಗೂ ಸರ್ಕಾರದ ಗಮನಕ್ಕೆ ತಂದು ಮನವಿ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಶಾಶ್ವತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ," ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
03/08/2026 02:25 pm
LOADING...