ಯಾದಗಿರಿ: ನಾರಾಯಣಪುರ ಎಡದಂಡೆ ಕಾಲುವೆಗಳಲ್ಲಿ ನೀರು ಹರಿಸುತ್ತಿರುವ ವೇಳೆಯಲ್ಲೇ ದುರಸ್ತಿ ಕಾಮಗಾರಿಗೆ ಟೆಂಡರ್ ಕರೆಯಲಾಗುತ್ತಿದ್ದು, ಬೇಸಿಗೆಯಲ್ಲಿ ಮಾಡಬೇಕಿದ್ದ ಕಾಮಗಾರಿಯನ್ನು ಈಗ ತರಾತುರಿಯಲ್ಲಿ ನಡೆಸಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಯಾದಗಿರಿ ಜಿಲ್ಲೆಯ ಕೆಂಭಾವಿ ಕೆಬಿಜೆಎನ್‌ಎಲ್ ವಿಭಾಗ-1, ವಿಭಾಗ-2 ಹಾಗೂ ವಿಭಾಗ-21 ವ್ಯಾಪ್ತಿಯ ನಾರಾಯಣಪುರ ಎಡದಂಡೆ ಕಾಲುವೆಗಳ ದುರಸ್ತಿ ಕಾಮಗಾರಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ.
ಕಾಲುವೆಗಳಲ್ಲಿ ಸಿಲ್ಟ್ ತೆರವು, ಮುಳ್ಳಿನ ಗಿಡಗಳ ತೆರವು ಹಾಗೂ ಸ್ವಚ್ಛತಾ ಕಾಮಗಾರಿಗಳನ್ನು ಬೇಸಿಗೆಯಲ್ಲೇ ಪೂರ್ಣಗೊಳಿಸಬೇಕಾಗಿತ್ತು. ಆದರೆ ಅಧಿಕಾರಿಗಳು ಯಾವುದೇ ಕೆಲಸ ಕೈಗೊಳ್ಳದೆ, ಈಗ ಕಾಲುವೆಗೆ ನೀರು ಹರಿಸಿದ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಲುವೆಗಳಲ್ಲಿ ಮುಳ್ಳಿನ ಗಿಡಗಳು ಹಾಗೂ ಪೊದೆಗಳು ಬೆಳೆದು ನೀರಿನ ಹರಿವಿಗೆ ಅಡ್ಡಿಯಾಗಿದ್ದು, ಇದರಿಂದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ.
ಕಾಲುವೆ ಸ್ವಚ್ಛತೆಗೆ ಸರ್ಕಾರ ಸುಮಾರು 2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರೂ, ಕಾಮಗಾರಿ ನಡೆಸದೆ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅನುದಾನ ದುರ್ಬಳಕೆ ಮಾಡಲು ಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈಗಾಗಲೇ ರೈತರು ಸ್ವಂತ ಖರ್ಚಿನಲ್ಲೇ ಕಾಲುವೆಗಳನ್ನು ಸ್ವಚ್ಛಗೊಳಿಸಿಕೊಂಡು ಬೆಳೆಗಳಿಗೆ ನೀರು ಹರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಬೇಸಿಗೆಯಲ್ಲಿಯೇ ಟೆಂಡರ್ ಕರೆದು ದುರಸ್ತಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನೀರು ಹರಿಸುವ ಸಂದರ್ಭದಲ್ಲಿ ಕಾಮಗಾರಿ ಹೆಸರಿನಲ್ಲಿ ಸರ್ಕಾರಿ ಹಣ ಬಳಕೆ ಮಾಡಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸರ್ಕಾರ ಮತ್ತು ಕೆಬಿಜೆಎನ್‌ಎಲ್ ಅಧಿಕಾರಿಗಳನ್ನು ಒತ್ತಾಯಿಸಿವೆ.
PublicNext
05/08/2026 10:53 pm
LOADING...