ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿಯಲ್ಲಿ ನಡುಕ ಹುಟ್ಟಿಸಿದ ಕೆಮಿಕಲ್ ಸೋರಿಕೆ: ಜೀವ ಕಳೆದುಕೊಂಡ ಮೂವರು ಯುವಕರು

ಯಾದಗಿರಿ: ಯಾದಗಿರಿ ಜಿಲ್ಲೆಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಹೃದಯವಿದ್ರಾವಕ ದುರಂತ ಸಂಭವಿಸಿದೆ. ಖಾಸಗಿ ಕೆಮಿಕಲ್ ಕಾರ್ಖಾನೆಯಲ್ಲಿ ವಿಷಕಾರಿ ಗ್ಯಾಸ್ ಸೋರಿಕೆಯಾಗಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ಕಾರ್ಖಾನೆಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಾದಗಿರಿ ತಾಲೂಕಿನ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಔಷಧೀಯ ಖಾಸಗಿ ಲ್ಯಾಬೋರೇಟರಿ ಕೆಮಿಕಲ್ ಕಾರ್ಖಾನೆಯಲ್ಲಿ ಬುಧವಾರ ಮುಂಜಾನೆ ಕೆಮಿಕಲ್ ಸ್ಕ್ರಬರ್ ಘಟಕದಲ್ಲಿ ವಿಷಕಾರಿ ಗ್ಯಾಸ್ ಸೋರಿಕೆಯಾಗಿದೆ. ಗ್ಯಾಸ್ ಸೋರಿಕೆಯಿಂದ ಉಂಟಾದ ವಿಷಕಾರಿ ಹೊಗೆ ಮತ್ತು ದುರ್ವಾಸನೆಯಿಂದ ಉಸಿರುಗಟ್ಟಿದ ಪರಿಣಾಮ, ಕರ್ತವ್ಯದಲ್ಲಿದ್ದ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ತೆಲಂಗಾಣ ಮೂಲದ ಕಾಟ್ಲಾ ಗಣೇಶ್ (23), ಮಧ್ಯಪ್ರದೇಶ ಮೂಲದ ವಿಕ್ರಮ್ ಸಿಂಗ್ ಗೊಂಡ (25) ಹಾಗೂ ಸಂಜಯ್ ಸಿಂಗ್ ಗೊಂಡ (25) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಆಂಧ್ರಪ್ರದೇಶ ಮೂಲದ ಮಂಚಾಲ ಹೇಮಂತ್ ಮತ್ತು ಮಂಚಾಲ ಶಿವಕುಮಾರ್ ಅವರನ್ನು ತಕ್ಷಣವೇ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ದುರಂತದ ಬಳಿಕ ಕಾರ್ಖಾನೆಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸೈದಾಪುರ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ಯಾಸ್ ಸೋರಿಕೆಗೆ ನಿಖರ ಕಾರಣವೇನು ಹಾಗೂ ಸುರಕ್ಷತಾ ಕ್ರಮಗಳಲ್ಲಿ ಯಾವುದೇ ಲೋಪವಾಗಿದೆಯೇ ಎಂಬ ಕುರಿತು ತನಿಖೆ ಆರಂಭಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯರು ಕಾರ್ಖಾನೆಯ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿರುವ ಈ ದುರಂತವು ಮತ್ತೊಮ್ಮೆ ಕೈಗಾರಿಕಾ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಗ್ಯಾಸ್ ಸೋರಿಕೆಗೆ ನಿಖರ ಕಾರಣವೇನು, ಸುರಕ್ಷತಾ ನಿಯಮಗಳು ಸಮರ್ಪಕವಾಗಿ ಪಾಲನೆಯಾಗಿದ್ದವೆಯೇ ಎಂಬುದು ತನಿಖೆಯ ಬಳಿಕವೇ ಸ್ಪಷ್ಟವಾಗಬೇಕಿದೆ. ಈ ದುರಂತಕ್ಕೆ ಸಂಬಂಧಿಸಿದಂತೆ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Edited By :
PublicNext

PublicNext

05/08/2026 06:36 pm

Cinque Terre

6.75 K

Cinque Terre

0

ಸಂಬಂಧಿತ ಸುದ್ದಿ